ಸಿರುಗುಪ್ಪ : ನಗರದ ಸಿ.ಡಿ.ಪಿ.ಓ ಕಛೇರಿ ಸಭಾಂಗಣದಲ್ಲಿ ತಾಲೂಕಾಡಳಿತ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗಳ ಸಹಯೋಗದಲ್ಲಿ ನಡೆದ ಶ್ರೀ ಕೃಷ್ಣ ಜನ್ಮಾಷ್ಟಮಿ ಜಯಂತ್ಯೋತ್ಸವ ಸಮಾರಂಭವನ್ನು ಶಿರಸ್ತೆದಾರ ಸಿದ್ದಾರ್ಥ್ ಕಾರಂಜಿ ಅವರು ಉದ್ಘಾಟಿಸಿದರು.
ನಂತರ ಮಾತನಾಡಿ ಜೀವನದ ಪ್ರತಿಯೊಂದು ಹಂತದಲ್ಲೂ ನ್ಯಾಯ ಧರ್ಮದ ನಂಬಿಕೆಯಲ್ಲಿ ಜೀವನದ ಮಾರ್ಗದರ್ಶನ ನೀಡಿದ ಕೃಷ್ಣ ಪರಮಾತ್ಮನು ನಮ್ಮ ನಿಮ್ಮೆಲ್ಲರ ಕಷ್ಟಗಳನ್ನು ದೂರಮಾಡಿ ಅಂತ್ಯವಿಲ್ಲದ ಸಂತೋಷ ಮತ್ತು ಯಶಸ್ಸನು ನೀಡಲೆಂದರು.
ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಮಲ್ಲಿಕಾರ್ಜುನ ಅವರು ಮಾತನಾಡಿ ಶ್ರೀ ಕೃಷ್ಣರ ಬಾಲ್ಯದ ಲೀಲೆಗಳನ್ನು ತಿಳಿಸುವ ಉದ್ದೇಶದಿಂದ ಸರ್ಕಾರದ ವತಿಯಿಂದ ಜಯಂತ್ಯೋತ್ಸವ ಆಚರಿಸಲಾಗುತ್ತಿದ್ದು, ಎಲ್ಲರಿಗೂ ಕೃಷ್ಣ ಪರಮಾತ್ಮನು ಆದರ್ಶಪ್ರಿಯರಾಗಿದ್ದಾರೆ ಎಂದು ತಿಳಿಸಿದರು.
ಸರ್ಕಾರಿ ಪ್ರೌಡಶಾಲೆಯ ಶಿಕ್ಷಕರಾದ ಅನಂತ ಪದ್ಮನಾಭ ಅವರು ಶ್ರೀ ಕೃಷ್ಣನು ಬಾಲ್ಯದಿಂದಲೂ ಅವರು ಮಾಡಿದ ಲೀಲೆಗಳು, ವಿವಿಧ ಅವತಾರಗಳು ಹಾಗೂ ಜಗತ್ತಿಗೆ ಭಗವದ್ಗೀತೆಯ ಮೂಲಕ ನೀಡಿದ ಉಪದೇಶಗಳ ಬಗ್ಗೆ ತಮ್ಮ ವಿಶೇಷ ಉಪನ್ಯಾಸದಲ್ಲಿ ವಿವರಿಸಿದರು.
ಇದೇ ವೇಳೆ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ರಾಘವೇಂದ್ರವರ್ಮ, ತಾಲೂಕು ಪಂಚಾಯಿತಿ ವ್ಯವಸ್ಥಾಪಕಿ ಸುಜಾತ, ಸರ್ಕಾರಿ ನೌಕರರ ಸಂಘದ ಸದಸ್ಯ ವೆಂಕಟೇಶ ಯಾದವ್, ತಾಲೂಕು ಯಾದವ ಸಮಾಜದ ಅಧ್ಯಕ್ಷ ಪಕ್ಕೀರಪ್ಪ, ಹಾಗೂ ಇನ್ನಿತರ ಪದಾಧಿಕಾರಿಗಳು, ಇಲಾಖೆಗಳ ಸಿಬ್ಬಂದಿಗಳು ಇದ್ದರು.
ವರದಿ : ಶ್ರೀನಿವಾಸ ನಾಯ್ಕ




