ತುರುವೇಕೆರೆ: ತಾಲ್ಲೂಕು ವೈಷ್ಣವ ಸಭಾದಿಂದ ತಾಲ್ಲೂಕಿನ ಕಲ್ಕೆರೆ ಗ್ರಾಮದ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ವಿಶಿಷ್ಟಾದ್ವೈತ ಸಿದ್ದಾಂತ ಪ್ರತಿಪಾದಕ ಶ್ರೀ ರಾಮಾನುಜಾಚಾರ್ಯರ ಜಯಂತಿಯನ್ನು ಆಚರಿಸಲಾಯಿತು.
ತಾಲ್ಲೂಕು ವೈಷ್ಣವ ಸಭಾದ ಕಾರ್ಯದರ್ಶಿ ಜನಾರ್ಧನ್ ಮಾತನಾಡಿ, ಆಚಾರ್ಯ ರಾಮಾನುಜರು ಮೈಸೂರು ಸಂಸ್ಥಾನದಲ್ಲಿ 11 ನೇ ಶತಮಾನದಲ್ಲಿ ವೈಷ್ಣವ ಪಂಥದ ಅಭಿವೃದ್ದಿಗಾಗಿ ಶ್ರಮಿಸಿದವರು. ತಮ್ಮ ಗ್ರಂಥಗಳ ಮೂಲಕ ತಾರ್ಕಿಕವಾಗಿ ಸಿದ್ಧಾಂತ ಶಾಸ್ತ್ರರೂಪದಲ್ಲಿ ಕ್ರೋಢೀಕರಿಸಿ, ವಿಶಿಷ್ಟಾದ್ವೈತ ಸಂಪ್ರದಾಯವನ್ನು ಪ್ರತಿಪಾದಿಸಿ ಹಳ್ಳಿಹಳ್ಳಿಗಳನ್ನು ಸಂಚರಿಸಿ ಲೋಕದ ಸಮಸ್ತ ಜನಗಳಿಗೂ ಆತ್ಮೋದ್ಧಾರ ಮಾಡಲು ಪ್ರಚಾರ ಮಾಡಿ, ಸಮಾನತೆಯನ್ನು ಸಾರಿದ ಮಹನೀಯರು ಎಂದರು.
ಕಾರ್ಯಾಧ್ಯಕ್ಷ ಮುರಳೀದಾಸ್ ಮಾತನಾಡಿ, ಅಸ್ಪೃಶ್ಯತೆ ತಾಂಡವವಾಡುತ್ತಿದ್ದ ಕಾಲದಲ್ಲಿ ಎಲ್ಲಾ ವರ್ಗದವರೂ ಒಗ್ಗಟ್ಟಿನಿಂದ ಸಾಮರಸ್ಯದಿಂದ ಬಾಳ್ವೆ ಮಾಡಲು ಸಮಾನತೆಯ ಸಂದೇಶ ಸಾರಿದ ಮಹಾನ್ ಆಚಾರ್ಯರು ಶ್ರೀ ರಾಮಾನುಜಾಚಾರ್ಯರು. ಅವರ ತತ್ವಸಿದ್ಧಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಮಾನತೆಯ ಸಮಾಜ ನಿರ್ಮಾಣ ಮಾಡುವಲ್ಲಿ ಹಾಗೂ ವೈಷ್ಣವ ಪಂಥದ ಅಭಿವೃದ್ದಿಗೆ ಪ್ರತಿಯೊಬ್ಬರೂ ಶ್ರಮಿಸಬೇಕಿದೆ ಎಂದರು.
ಈ ಸಂದರ್ಭದಲ್ಲಿ ಕಲ್ಕೆರೆ ಗ್ರಾಮದ ಶ್ರೀ ಆಂಜನೇಯಸ್ವಾಮಿಗೆ ವಿಶೇಷ ಪಂಚಾಮೃತ ಅಭಿಷೇಕ ನೆರವೇರಿಸಲಾಯಿತು. ವಿಶಿಷ್ಟಾದ್ವೈತ ಸಿದ್ದಾಂತ ಪ್ರತಿಪಾದಕ ಶ್ರೀ ರಾಮಾನುಜಾಚಾರ್ಯರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪನಮನ ಸಲ್ಲಿಸಲಾಯಿತು. ತಾಲ್ಲೂಕು ವೈಷ್ಣವ ಸಭಾದ ಅಧ್ಯಕ್ಷ ಭಾಸ್ಕರ್, ಗೌರವಾಧ್ಯಕ್ಷ ಪುಟ್ಟಸ್ವಾಮಿ, ಉಪಾಧ್ಯಕ್ಷ ನರಸಿಂಹಮೂರ್ತಿ, ಖಜಾಂಚಿ ಮಂಜುನಾಥ್, ವೈಷ್ಣವ ಸಭಾದ ಮೂಡಲಗಿರಿ, ಹೇಮಲತಾರಂಗನಾಥ್ ಸೇರಿದಂತೆ ವೈಷ್ಣವ ಬಾಂದವರು ಉಪಸ್ಥಿತರಿದ್ದರು.
ವರದಿ: ಗಿರೀಶ್ ಕೆ ಭಟ್, ತುರುವೇಕೆರೆ




