Ad imageAd image

ಇತಿಹಾಸ ಸಾರುವ ಕಂದಗಲ್ಲಿನ ಶ್ರೀ ಶಂಕರಲಿಂಗ ದೇವಸ್ಥಾನ ಶಂಕರದಾಶಿಮಯ್ಯನವರ ಭಾವಚಿತ್ರ

Bharath Vaibhav
ಇತಿಹಾಸ ಸಾರುವ ಕಂದಗಲ್ಲಿನ ಶ್ರೀ ಶಂಕರಲಿಂಗ ದೇವಸ್ಥಾನ ಶಂಕರದಾಶಿಮಯ್ಯನವರ ಭಾವಚಿತ್ರ
WhatsApp Group Join Now
Telegram Group Join Now

 ಇಲಕಲ್:-  ಕಂದಗಲ್ಲ =ಕಂದಗಲ್ಲ ಪುರಾತನ ಗ್ರಾಮವಾಗಿದ್ದು ಅರಸು ಮನೆತನಗಳು ಆಳಿದ ಪ್ರತಿಕವಾಗಿ ಪ್ರಾಚೀನ ಅವಶೇಷಗಳು ಉಳಿದಿವೆ. ಗ್ರಾಮದ ಇತಿಹಾಸವನ್ನು ಹೇಳುವ ಶಿಲಾಶಾಸನಗಳು ದೊರೆತಿವೆ. ಗ್ರಾಮದ ಮುಂದೆ ಇರುವ ಶಿಲಾಮಂಟಪದ ಸ್ವಾಮಿ ಶಂಕರಲಿಂಗ ದೇವಾಲಯ ಮತ್ತು ಸಪ್ತಲಿಂಗ ಇರುವ ಸೋಮೇಶ್ವರ ದೇವಾಲಯಗಳು ಶಿಥಿಲಗೊಂಡು ಇತಿಹಾಸದ ಪಳೆಯುಳಿಕೆಗಳಾಗಿ ನಿಂತಿವೆ.

ಕಂದಗಲ್ಲ, ಹತ್ತನೇ ಶತಮಾನ ಪೂರ್ವದಲ್ಲಿ `ಸ್ಕಂದಶಿಲೆ” ಮತ್ತು ‘ಕಂದಶಿಲೆ’ ಎಂಬ ಹೆಸರಿನಿಂದ ಕರೆಯಲ್ಪಡುತ್ತಿತ್ತು. ಇಲ್ಲಿರುವ ಶಂಕರಲಿಂಗ ದೇವರು ಹನ್ನೆರಡನೆಯ ಶತಮಾನಕ್ಕಿಂತ ಪೂರ್ವದಲ್ಲಿದ್ದ ಶಂಕರದಾಶಿಮಯ್ಯರ ಆರಾಧ್ಯ ದೈವವಾಗಿತ್ತು.

ಇತಿಹಾಸ ಸಂಶೋಧನೆಯ ಪ್ರಕಾರ ಹಾಗೂ ವೆಂಕಟಾಚಲ ಶಾಸ್ತ್ರೀಗಳು ರಚಿಸಿದ ‘ಕನ್ನಡ ನಾಡಿನ ಚರಿತ್ರೆ’ ಎಂಬ ಬೃಹತ ಗ್ರಂಥದಲ್ಲಿ ಕಂದಗಲ್ಲದಲ್ಲಿ ಹಿಂದೆ ಗೋವಿಂದಭಟ್ಟ ಮತ್ತು ದುಮ್ಮವ್ವ ಎಂಬ ದಂಪತಿಗಳು ವಾಸವಾಗಿದ್ದರು. ಅವರು ಗ್ರಾಮದಲ್ಲಿರುವ ಶಂಕರಲಿಂಗವನ್ನು ಆರಾಧ್ಯದೈವವನ್ನಾಗಿ ಮಾಡಿಕೊಂಡಿದ್ದರು. ಈ ದಂಪತಿಗಳಿಗೆ ಕಾಶಿಯಾತ್ರೆ ಮಾಡಬೇಕೆಂಬ ಇಚ್ಛೆಯಾಯಿತು.

ಈ ಉದ್ದೇಶದಿಂದ ಕಂದಗಲ್ಲ ಗಾಮದಿಂದ 12 ಕಿ.ಮೀ. ದೂರದಲ್ಲಿರುವ ಕೃಷ್ಣಾನದಿ ತೀರದ ಲಿಂಗಸೂರು ತಾಲೂಕಿನ ನವಲಿ ಜಡೆ ಶಂಕರಲಿಂಗ ಮಂದಿರದಲ್ಲಿ ವಸತಿ ಮಾಡಿದರು. ಅಂದುರಾತ್ರಿ ಗೋವಿಂದ ಭಟ್ಟರ ಕನಸಿನಲ್ಲಿ ಕಾಶಿ ವಿಶ್ವನಾಥ ಕಾಣಿಸಿಕೊಂಡು ನೀನು ಕಾಶಿಯವರೆಗೆ ಬರುವುದು ಬೇಡ. ನಿನ್ನ ಜನ್ಮಸ್ಥಳ ಕಂದಗಲ್ಲದಲ್ಲಿ ವಾಸವಾಗಿದ್ದುಕೊಂಡು ಪೂಜೆ, ಕಾಯಕ ಮಾಡುತ್ತಾ ಶರಣ ಧರ್ಮ ಪ್ರಚಾರ ಮಾಡು ಎಂದು ಹೇಳಿ ಈ ದಂಪತಿಗಳಿಗೆ ಅಂದರೆ ಗೋವಿಂದ ಭಟ್ಟರಿಗೆ ‘ಶಂಕರದಾಸಿಮಯ್ಯ’ ಎಂದು, ಆತನ ಪತ್ನಿ ದುಮ್ಮವ್ವಗೆ ‘ಶಿವದಾಸಿ’ ಎಂದು ನಾಮಕರಣ ಮಾಡಿದರೆಂದು ಚರಿತ್ರೆಯಿಂದ ತಿಳಿದು ಬರುತ್ತದೆ.

ಅಂದಿನಿಂದ ಶಂಕರದಾಶಿಮಯ್ಯ ತನ್ನ ಜನ್ಮಭೂಮಿ ಕಂದಗಲ್ಲದಲ್ಲಿ ವಾಸವಾಗಿದ್ದುಕೊಂಡು ಪೂಜೆ ಕಾಯಕ ಮಾಡುತ್ತಾ ವೀರಶೈವ ಧರ್ಮ ಪ್ರಚಾರ ಮಾಡುತ್ತ ಅನೇಕ ವಚನಗಳನ್ನು ರಚಿಸಿ ಬಸವಾದಿ ಪ್ರಮಾಥ ಶರಣರಿಗೆ ವಚನ ರಚನೆಗೆ ಮಾರ್ಗದರ್ಶನ ಮಾಡಿದ ಎಂದು ಇತಿಹಾಸದಿಂದ ತಿಳಿದು ಬರುತ್ತದೆ. ಶಂಕರದಾಶಿಮಯ್ಯರ ಚರಿತ್ರೆ ‘ಹರಿಹರ’. ಕವಿ ಬರೆದ ‘ರಗಳೆ’ ಗಳಲ್ಲಿ ಬಂದಿದೆ. 1687ರಲ್ಲಿ ಹೂವಿನ ಹಡಗಲಿ ತಾಲೂಕಿನ ಪಂಡಿತ ಮಲ್ಲಿಕಾರ್ಜುನರವರು ಶಂಕರದಾಶಿಮಯ್ಯರ ಕುರಿತು ಬರೆದಿದ್ದಾರೆ.

ಡಾ. ಸ್ನೇಹಾ ಭೂ ಸನೂರರು ಶಂಕರದಾಶಿಮಯ್ಯರ ಪುರಾಣದ ಮೇಲೆ ಸಂಶೋಧನೆ ನಡೆಸಿ ಪಿ.ಎಚ್‌.ಡಿ. ಮಾಡಿರುವದಾಗಿ ಹೇಳುತ್ತಾರೆ. ಶಂಕರದಾಶಿಮಯ್ಯರು ರಚಿಸಿದ ವಚನಗಳು ಕಲ್ಯಾಣ ಶರಣರ ಧಾರ್ಮಿಕ ಹೋರಾಟಕ್ಕೆ ಪಾಕ್ಷಿಕ ಶಕ್ತಿಯಾಗಿದ್ದವು ಎಂಬುದು ಸೊಡ್ಡಳ ಬಾಚರಸ ‘ಮಡಿವಾಳ ಮಾಚಿದೇವ’, ‘ಆಯ್ದಕ್ಕಿ ಲಕ್ಕಮ್ಮ’,’ ‘ಬಸವಣ್ಣ’, ‘ಚನ್ನಬಸವಣ್ಣ’, ‘ಉರಿಲಿಂಗ ಪದ್ಧಿ’, ‘ಶಿವಯೋಗಿ ಸಿದ್ಧರಾಮ’ ವಚನಗಳೆ ಸಾಕ್ಷಿ. ಇತಿಹಾಸ ಹಾಗೂ ಧಾರ್ಮಿಕ ಮಹತ್ವ ಪಡೆದ ಕಂದಗಲ್ಲಿನ ಶಂಕರಲಿಂಗ ದೇವಸ್ಥಾನ, ವಿನಾಶದ ಅಂಚಿನಲ್ಲಿತ್ತು ಅದನ್ನು ಉಳಿಸುವ ಕಾರ್ಯ ಸರಕಾರ ಮಾಡಬೇಕಾಗಿತ್ತು. ಶಿಥಿಲವಾಗಿರುವ ದೇವಸ್ಥಾನ, ಪುನರ ನಿರ್ಮಿಸಲು ಪರಾತತ್ವ ಇಲಾಖೆಯ ಗಮನ ಸೆಳೆಯಲಾಗಿತ್ತು,ಆದರೆ ನಿರ್ಮಿಸಲು ಸರಕಾರ ಮುಂದೆ ಬರಲಿಲ್ಲ ಸಮಸ್ತ ಮನುಕುಲಕ್ಕೆ ಹದುಳ ಬಯಸಿದವರು. ಶಂಕರದಾಶಿಮಯ್ಯರು,ಅಂದು ಅವರು ಬೋಧಿಸಿದ ತತ್ವಗಳು ಇಂದಿಗೂ ಪ್ರಸ್ತುತವಾಗಿವೆ. ಅಂತಹ ಶರಣ ಶ್ರೇಷ್ಠ ಮಹಾಮಹಿಮ ಶಂಕರದಾಶಿಮಯ್ಯರಿಗೆ ಸ್ಫೂರ್ತಿ ನೀಡಿದ ಕಂದಗಲ್ಲ ಗ್ರಾಮದ ಶಂಕರಲಿಂಗ ದೇವಾಲಯ, ಸರಕಾರ ಮತ್ತು ಸಾರ್ವಜನಿಕರ ನಿರ್ಲಕ್ಷ್ಯಕ್ಕೆ ಒಳಗಾಗಿ ಅಳಿವಿನ ಅಂಚಿನಲ್ಲಿತ್ತು

ಆಗ ಈ ದೇವಾಲಯದ ಪುನರ ನಿರ್ಮಾಣಕ್ಕೆ ಗ್ರಾಮದ ಯುವಕರು ಮುಂದಾಗಿ ಶ್ರೀ ಶಂಕರಲಿಂಗ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ರಚಿಸಿ ಅದರ ಮುಖಾಂತರ ದೇವಾಲಯ ಕಟ್ಟಲು ಪ್ರಾರಂಭ ಮಾಡಿ ಶಕ್ತಿ ಮೀರಿ ದುಡಿದು ದೇಣಿಗೆ ಸಂಗ್ರಹಿಸಿ ದೇವಸ್ಥಾನವನ್ನು ಒಂದು ಹಂತಕ್ಕೆ ತಂದು ನಿಲ್ಲಿಸಿದ್ದಾರೆ .ಆದರೆ ಇನ್ನು ದೇವಸ್ಥಾನದ ಕೆಲಸ ಬಹಳ ಇದೆ ಶಂಕರದಾಶಿಮಯ್ಯನವರ ದೇವಸ್ಥಾನವಾಗಬೇಕು ಭಕ್ತರಿಗೆ ಸಾಕಷ್ಟು ಸ್ಥಳಾವಕಾಶ ಬೇಕು ವಿಶ್ರಮಸಲು ಜಾಗೆ ಬೇಕು ದೇವಸ್ಥಾನದಲ್ಲಿ ಭಕ್ತರಿಗೆ ಜವಳ, ಮದುವೆ ಹಾಗೂ ಇನ್ನಿತರ ಕಾರ್ಯಗಳಿಗೆ ಮತ್ತು ಕಾರ್ಯಕ್ರಮಗಳಿಗೆ ಭವನ ಬೇಕು,ಇದಲ್ಲದೆ ಇನ್ನೂ ಸಾಕಷ್ಟು ಕೆಲಸಗಳು ಬಾಕಿ ಇದ್ದು ಸರಕಾರ, ಸಾರ್ವಜನಿಕರು, ಭಕ್ತರು ಈ ದೇವಾಲಯದ ಕಡೆ ಗಮನ ನೀಡಿ ಕಂದಗಲ್ಲ ಗ್ರಾಮದ ಇತಿಹಾಸ ಸಾರುವ ಈ ದೇವಾಲಯವನ್ನು ಅಚ್ಚುಕಟ್ಟಾಗಿ ನಿರ್ಮಿಸಿ ಮುಂದಿನ ಯುವಪೀಳಿಗೆಗೆ ಕಲ್ಪಿಸಿಕೊಡಬೇಕು.

ಅವಾಗ ಇಲ್ಲಿ ಆದ್ಯ ವಚನಕಾರ ಶಂಕರದಾಶಿಮಯ್ಯನವರ ಜಯಂತಿಯನ್ನು ಕೂಡ ದೊಡ್ಡ ಪ್ರಮಾಣದಲ್ಲಿ ಆಚರಣೆ ಮಾಡಲು ಅನುಕೊಲವಾಗುತ್ತದೆ. ಸ್ಥಳೀಯ ಇತಿಹಾಸ ಪ್ರತಿಯೊಬ್ಬರಿಗೂ ಮುಟ್ಟುವ ನಿಟ್ಟಿನಲ್ಲಿ ಸಹಕಾರಿಯಾಗುತ್ತದೆ.

ವರದಿ :-ದಾವಲ್ ಶೇಡಂ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!