ಸಿರುಗುಪ್ಪ: ನಗರದ ಶ್ರೀ ತಾಯಮ್ಮ ದೇವಿಯ 42ನೇ ರಥೋತ್ಸವ ಹಾಗೂ ತಾಲೂಕಿನ ತೆಕ್ಕಲಕೋಟೆ ಪಟ್ಟಣದಲ್ಲಿನ ಶ್ರೀ ಗುರು ಕಾಡಸಿದ್ದೇಶ್ವರ ರಥೋತ್ಸವವು ರವಿವಾರದಂದು ಅದ್ದೂರಿಯಾಗಿ ಜರುಗಿತು.
ಪ್ರತಿವರ್ಷ ಯುಗಾದಿ ಹಬ್ಬದಂದು ನಡೆಯುವ ರಥೋತ್ಸವ ನಿಮಿತ್ತ ದೇವಸ್ಥಾನಗಳಲ್ಲಿ ಬಿಲ್ವಾರ್ಚನೆ, ಪಂಚಾಮೃತಾಭಿಷೇಕ ಮಾಡಿ ವಿವಿಧ ಫಲಪುಷ್ಪ, ಆಭರಣಗಳಿಂದ ಅಲಂಕರಿಸಿ ಮಹಾ ಮಂಗಳಾರತಿಗೈದು ವಿಶೇಷ ಪೂಜೆ ಮಾಡಲಾಯಿತು.
ಸುತ್ತಮುತ್ತಲಿನ ಗ್ರಾಮಗಳಿಂದ ಭಕ್ತಾದಿಗಳು ಆಗಮಿಸಿ ಕಾಯಿ ಕರ್ಪೂರ ಎಡೆ ನೈವೇದ್ಯ ಸಮರ್ಪಿಸಿದರು. ಸಾಯಂಕಾಲ 6ಕ್ಕೆ ಜರುಗಿದ ರಥಕ್ಕೆ ಹೂಹಣ್ಣು ಎಸೆದು ಭಕ್ತಿಯಿಂದ ನಮಿಸಿದರು.
ಶ್ರೀ ಕಾಡಸಿದ್ದೇಶ್ವರ ಮಹಾ ರಥೋತ್ಸವ ನಿಮಿತ್ತ ಕಳೆದ 15 ದಿನಗಳಿಂದ ಜರುಗಿದ ಶ್ರೀಗುರು ಕಾಡಸಿದ್ದೇಶ್ವರ ಪುರಾಣ ಪ್ರವಚನ ಮಹಾ ಮಂಗಲಗೊಂಡಿತು.
ವರದಿ : ಶ್ರೀನಿವಾಸ ನಾಯ್ಕ