ತುರುವೇಕೆರೆ: ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲೊಂದಾದ ಇಂದಿರಾ ಕ್ಯಾಂಟೀನ್ ಶೀಘ್ರದಲ್ಲೇ ತುರುವೇಕೆರೆಯಲ್ಲಿ ಉದ್ಘಾಟನೆಗೊಂಡು ಸಾರ್ವಜನಿಕರಿಗೆ ಉತ್ತಮ ಆಹಾರ ಸೇವೆ ಒದಗಿಸಲಿದೆ ಎಂದು ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಶ್ರೀನಾಥ್ ಬಾಬು ತಿಳಿಸಿದರು.
ಮಾಧ್ಯಮದೊಂದಿಗೆ ಮಾತನಾಡಿದ ಅವರು, ಕಳೆದ 2013 ರಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದು ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದರು. ಈ ಸಂದರ್ಭದಲ್ಲಿ ಸರ್ಕಾರ ಅನ್ನಭಾಗ್ಯ, ಕ್ಷೀರಭಾಗ್ಯ ಸೇರಿದಂತೆ ಹಲವು ಯೋಜನೆಗಳನ್ನು ಜಾರಿಗೊಳಿಸಿತ್ತು. 2014ರಲ್ಲಿ ದೇಶದ ಮಾಜಿ ಪ್ರಧಾನಿಗಳಾದ ಇಂದಿರಾ ಗಾಂಧಿ ಅವರ ಹೆಸರಿನಲ್ಲಿ ಬಡವರಿಗೆ, ಕೂಲಿಕಾರ್ಮಿಕರಿಗೆ, ಬೀದಿಬದಿ ವ್ಯಾಪಾರಸ್ಥರಿಗೆ ಅತಿ ಕಡಿಮೆ ದರದಲ್ಲಿ ಬೆಳಿಗ್ಗೆ ಉಪಹಾರ, ಮಧ್ಯಾಹ್ನ ಹಾಗೂ ರಾತ್ರಿ ಊಟ ನೀಡುವ ಇಂದಿರಾ ಕ್ಯಾಂಟೀನ್ ಯೋಜನೆಯನ್ನು ಪ್ರಾರಂಭಿಸಿತು. ರಾಜ್ಯದ ಎಲ್ಲಾ ನಗರ ಹಾಗೂ ಪಟ್ಟಣ ಪಂಚಾಯ್ತಿ ವ್ಯಾಪ್ತಿಯಲ್ಲಿ ಇಂದಿರಾ ಕ್ಯಾಂಟೀನ್ ಪ್ರಾರಂಭವಾಗಿ ಉತ್ತಮ ಸೇವೆ ಒದಗಿಸಿದೆ ಎಂದರು.
ರಾಜ್ಯದ ಹಲವೆಡೆ ಇಂದಿರಾ ಕ್ಯಾಂಟೀನ್ ಪ್ರಾರಂಭವಾದರೂ ಸ್ಥಳಾವಕಾಶ, ಜಾಗದ ಸಮಸ್ಯೆ ಹಾಗೂ ತಾಂತ್ರಿಕ ಕಾರಣಗಳ ಕಾರಣದಿಂದ ತುಮಕೂರು ಜಿಲ್ಲೆಯ ತುರುವೇಕೆರೆ ಹಾಗೂ ಹುಳಿಯಾರಿನಲ್ಲಿ ಆಗಿರಲಿಲ್ಲ. ಮೇ ತಿಂಗಳಲ್ಲಿ ಹುಳಿಯಾರಿನಲ್ಲಿ ಇಂದಿರಾ ಕ್ಯಾಂಟೀನ್ ಉದ್ಘಾಟನೆಯಾಗಿದ್ದು, ತುರುವೇಕೆರೆಯಲ್ಲಿ ಉದ್ಘಾಟನೆಯೊಂದು ಬಾಕಿ ಉಳಿದಿದೆ. ಈಗ ಮತ್ತೆ ರಾಜ್ಯದಲ್ಲಿ 2023 ರಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ಎಲ್ಲಿ ಇಂದಿರಾ ಕ್ಯಾಂಟೀನ್ ಪ್ರಾರಂಭವಾಗಿಲ್ಲವೋ ಅಲ್ಲಿ ಶೀಘ್ರ ಸ್ಥಳ ಗುರುತಿಸಿ ಪ್ರಾರಂಭಿಸಬೇಕೆಂದು ಆದೇಶಿಸಿರುವ ಹಿನ್ನೆಲೆಯಲ್ಲಿ ಪಟ್ಟಣದ 3-4 ಕಡೆ ಕ್ಯಾಂಟೀನ್ ಪ್ರಾರಂಭಕ್ಕೆ ಸ್ಥಳ ಗುರುತಿಸಲಾಗಿತ್ತು. ಆದರೆ ಇಂದಿರಾ ಕ್ಯಾಂಟೀನ್ ಸ್ಥಾಪನೆಗೆ ನಿಗದಿಪಡಿಸಿದಷ್ಟೇ ಸ್ಥಳ ಬೇಕಿದ್ದ ಕಾರಣ ತಹಸೀಲ್ದಾರ್ ಅವರು ತಾಲ್ಲೂಕು ಕಛೇರಿ ಹಿಂಭಾಗ ಸ್ಥಳ ನೀಡಿದ್ದು, ಕಟ್ಟಡ ನಿರ್ಮಾಣವಾಗಿದೆ. ಅಲ್ಲದೆ ಆಹಾರ ತಯಾರಿಕೆಗೆ ಬೇಕಾದ ಪಾತ್ರಾ ಸಾಮಾನುಗಳು, ಅಗತ್ಯ ಸೌಲಭ್ಯಗಳು ಸಿದ್ದವಾಗಿದ್ದು ಉದ್ಘಾಟನೆ ಮಾತ್ರ ಆಗಬೇಕಿದೆ. ಇಂದಿರಾ ಕ್ಯಾಂಟೀನ್ನಲ್ಲಿ ಬೆಳಿಗ್ಗೆ 5 ರೂಗಳಿಗೆ ಉಪಹಾರ, ಮಧ್ಯಾಹ್ನ ಹಾಗೂ ರಾತ್ರಿ 10 ರೂಗಳಿಗೆ ಊಟ ದೊರೆಯಲಿದೆ ಎಂದರು.
ಇಂದಿರಾ ಕ್ಯಾಂಟೀನ್ ಉದ್ಘಾಟನೆಗೆ ದಿನಾಂಕ ನಿಗದಿಯಾಗಬೇಕಿದ್ದು, ಉದ್ಘಾಟನೆಯು ಶಾಸಕ ಎಂ.ಟಿ.ಕೃಷ್ಣಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು, ಜಿಲ್ಲಾ, ತಾಲೂಕು ಮಟ್ಟದ ಅಧಿಕಾರಿಗಳು, ಸಂಘ ಸಂಸ್ಥೆಗಳ ಪದಾಧಿಕಾರಿಗಳು, ನಾಗರೀಕರು ಎಲ್ಲರೂ ಪಾಲ್ಗೊಳ್ಳಲಿದ್ದಾರೆಂದರು.
ವರದಿ: ಗಿರೀಶ್ ಕೆ ಭಟ್