ತುರುವೇಕೆರೆ: ಪಟ್ಟಣದ ವಿನೋಬಾ ನಗರದ ಮನೆ ಮನೆಗೆ ತೆರಳಿ ಸಮೀಕ್ಷೆ ನಡೆಸುವ ಮೂಲಕ ಪರಿಶಿಷ್ಟ ಜಾತಿ/ ಮೂಲ ಜಾತಿ ಸಮಗ್ರ ಸಮೀಕ್ಷೆ 2025 ಕ್ಕೆ ಇಂದು ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಶ್ರೀನಾಥ್ ಬಾಬು ನೇತೃತ್ವದಲ್ಲಿ ಅಧಿಕೃತ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಶ್ರೀನಾಥ್ ಬಾಬು, ರಾಜ್ಯದಲ್ಲಿ ಶಿಕ್ಷಣ ಮತ್ತು ಸರ್ಕಾರಿ ಸೇವೆಯಲ್ಲಿ ಪರಿಶಿಷ್ಟ ಜಾತಿಯ ವಿವಿಧ ಉಪಜಾತಿಗಳೀಗೆ ಸೇರಿದವರ ಪ್ರಾತಿನಿಧ್ಯದ ಕುರಿತಂತೆ ದತ್ತಾಂತ ಪಡೆದು ಪರಿಶಿಷ್ಟ ಜಾತಿಯಲ್ಲಿ ಒಳಮೀಸಲಾತಿ ಬಗ್ಗೆ ವರದಿ ಸಲ್ಲಿಸಲು ಆಯೋಗ ವಿಚಾರಣಾ ಕಾಯ್ದೆ 1952ರ ಅಡಿಯಲ್ಲಿ ಉಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರಾದ ಹೆಚ್.ಎನ್.ನಾಗಮೋಹನ್ ದಾಸ್ ಅವರ ಅಧ್ಯಕ್ಷತೆಯಲ್ಲಿ ಏಕಸದಸ್ಯ ಆಯೋಗ ರಚಿಸಲಾಗಿದೆ. ಈ ಆಯೋಗಕ್ಕೆ ದತ್ತಾಂಶದ ಅಗತ್ಯತೆಯಿರುವುದರಿಂದ ಸರ್ಕಾರ ಮನೆ ಮನೆ ಸಮೀಕ್ಷೆ ನಡೆಸಿ ಮಾಹಿತಿ ಒದಗಿಸಲು ಸೂಚಿಸಿದೆ ಎಂದರು.

ಇಂದಿನಿಂದ ಮೇ 21 ರವರೆಗೆ ಪಟ್ಟಣದ ಎಲ್ಲಾ ವಾರ್ಡ್ಗಳ 13 ಮತಗಟ್ಟೆ ವ್ಯಾಪ್ತಿಯಲ್ಲಿ ಗಣತಿದಾರರು ಮನೆಮನೆಗೆ ಭೇಟಿ ನೀಡಿ ದತ್ತಾಂಶ ಕಲೆಹಾಕಲಿದ್ದಾರೆ. ಜಾತಿಗಣತಿಗೆ ಬರುವ ಗಣತಿದಾರರಿಗೆ ಪ್ರತಿ ಮನೆಯ ಕುಟುಂಬದ ಸದಸ್ಯರು ತಮ್ಮ ಚುನಾವಣಾ ಗುರುತಿನ ಚೀಟಿ, ಆಧಾರ್, ಪರಿತರ ಚೀಟಿ ಮಾಹಿತಿ ಸೇರಿದಂತೆ ಜಾತಿ, ಉಪಜಾತಿ, ಆದಾಯ ಸೇರಿದಂತೆ ಮತ್ತಿತರ ಮಾಹಿತಿಗಳನ್ನು ಒದಗಿಸಬೇಕಿದೆ. ಗಣತಿದಾರರು ನಾಗರೀಕರು ನೀಡಿದ ನಿಖರ ಮಾಹಿತಿಯನ್ನು ಆನ್ ಲೈನ್ ಮೂಲಕ ಸರ್ಕಾರ ನೀಡಿರುವ ಆಪ್ ನಲ್ಲಿ ನಮೂದಿಸಬೇಕು. ಆದ್ದರಿಂದ ನಾಗರೀಕರು ಗಣತಿದಾರರಿಗೆ ಅಗತ್ಯ ಮಾಹಿತಿ ಒದಗಿಸಿ ಗಣತಿ ಕಾರ್ಯ ಯಶಸ್ಸಿಗೆ ಸಹಕಾರ ನೀಡಬೇಕೆಂದು ಕೋರಿದರು.
ಈ ಸಂದರ್ಭದಲ್ಲಿ ಅಕ್ಷರ ದಾಸೋಹ ಅಧಿಕಾರಿ ಸವಿತ, ಬಿ.ಆರ್.ಸಿ. ಸುರೇಶ್, ಸಿಆರ್.ಪಿ. ಸುರೇಶ್, ಪಪಂ ಅಧಿಕಾರಿಗಳಾದ ನರಸಿಂಹಮೂರ್ತಿ, ಕೃಷ್ಣಮೂರ್ತಿ, ರವಿಕುಮಾರ್, ಗಣತಿದಾರ ರಾಜಕುಮಾರ್ ಮುಂತಾದವರಿದ್ದರು.
ವರದಿ: ಗಿರೀಶ್ ಕೆ ಭಟ್




