ಬೆಂಗಳೂರು: ಕಳೆದ ನಾಲ್ಕು ವರ್ಷಗಳಿಂದ ರಾಜ್ಯದಲ್ಲಿ ಏರುಗತಿಯಲ್ಲಿ ಸಾಗಿದ್ದ ಎಸ್‌ಎಸ್‌ಎಲ್ಸಿ ಫಲಿತಾಂಶ ಈ ಬಾರಿ ತೀವ್ರ ಕುಸಿತ ಕಂಡಿದೆ.
ಇದರ ಪರಿಣಾಮ ಪದವಿ ಪೂರ್ವ ಕಾಲೇಜುಗಳಲ್ಲಿ ದಾಖಲಾತಿ ಪ್ರಮಾಣ ಭಾರಿ ಸಂಖ್ಯೆಯಲ್ಲಿ ಕುಸಿತವಾಗುವ ಸಾಧ್ಯತೆ ಇದೆ. ಪಿಯು ಕಾಲೇಜುಗಳಿಗೆ ಸುಮಾರು ಒಂದು ಲಕ್ಷ ವಿದ್ಯಾರ್ಥಿಗಳ ಕೊರತೆ ಎದುರಾಗಿದೆ ಎಂದು ಹೇಳಲಾಗಿದೆ.
ಈ ಬಾರಿ ಶೇಕಡಾ 10ರಷ್ಟು ಫಲಿತಾಂಶ ಕುಸಿತದಿಂದ ಪಿಯುಸಿ ದಾಖಲಾತಿ 6 ಲಕ್ಷ ದಾಟುವುದು ಕೂಡ ಕಷ್ಟವೆನ್ನಲಾಗಿದೆ. ಪದವಿಪೂರ್ವ ಶಿಕ್ಷಣ ಇಲಾಖೆ 2024-25ನೇ ಸಾಲಿನ ದಾಖಲಾತಿ ಪ್ರಕ್ರಿಯೆಯನ್ನು ಎಸ್‌ಎಸ್‌ಎಲ್ಸಿ ಫಲಿತಾಂಶ ಪ್ರಕಟವಾದ ಮರು ದಿನದಿಂದಲೇ ಆರಂಭಿಸಿದೆ. ಜೂನ್ 1ರಿಂದ ತರಗತಿಗಳು ಆರಂಭವಾಗಲಿದೆ.
ಕೆಲವು ಪ್ರತಿಷ್ಠಿತ ಕಾಲೇಜುಗಳನ್ನು ಹೊರತುಪಡಿಸಿ ಸರ್ಕಾರಿ, ಅನುದಾನಿತ, ಮಧ್ಯಮ ಕ್ರಮಾಂಕದ ಇತರೆ ಖಾಸಗಿ ಕಾಲೇಜುಗಳಲ್ಲಿ ದಾಖಲಾತಿ ಪ್ರಮಾಣ ಭಾರೀ ಕುಸಿತ ಕಂಡಿದೆ.
ಪ್ರತಿವರ್ಷ ಎಸ್‌ಎಸ್‌ಎಲ್ಸಿ ಪಾಸಾದ ಮಕ್ಕಳಲ್ಲಿ ಶೇಕಡ 95ರಷ್ಟು ಮಂದಿ ಪಿಯುಸಿಗೆ ಸೇರ್ಪಡೆಯಾಗುತ್ತಾರೆ. ಉಳಿದವರು ಐಟಿಐ, ಡಿಪ್ಲೋಮಾ ಮೊದಲಾದ ಕೋರ್ಸ್ ಗಳಿಗೆ ಪ್ರವೇಶ ಪಡೆಯುತ್ತಾರೆ.
ಕಳೆದ ಮೂರು -ನಾಲ್ಕು ವರ್ಷಗಳಲ್ಲಿ ಎಸ್‌ಎಸ್‌ಎಲ್ಸಿ ಫಲಿತಾಂಶ ಏರುಗತಿಯಲ್ಲಿ ಸಾಗಿ ಪ್ರತಿವರ್ಷ ಪ್ರಥಮ ಪಿಯುಸಿಗೆ ಸುಮಾರು 7 ಲಕ್ಷ ವಿದ್ಯಾರ್ಥಿಗಳು ಪ್ರವೇಶ ಪಡೆಯುತ್ತಿದ್ದರು.
ಈ ಬಾರಿ ಶೇಕಡ 10 ರಷ್ಟು ಫಲಿತಾಂಶ ಕುಸಿತದ ಕಾರಣ ಪಿಯುಸಿಗೆ 6 ಲಕ್ಷ ವಿದ್ಯಾರ್ಥಿಗಳು ಪ್ರವೇಶ ಪಡೆಯುವ ಸಾಧ್ಯತೆ ಇದೆ. ಎಸ್‌ಎಸ್‌ಎಲ್ಸಿ ಪರೀಕ್ಷೆ -2ರ ಫಲಿತಾಂಶಕ್ಕಾಗಿ ಪಿಯು ಕಾಲೇಜುಗಳು ಕಾಯುತ್ತಿದ್ದು, ಪಾಸಾದ ವಿದ್ಯಾರ್ಥಿಗಳು ಪ್ರವೇಶ ಪಡೆಯುವ ನಿರೀಕ್ಷೆ ಇದೆ.