ಬೆಂಗಳೂರು : ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆಗೆ ರಾಜ್ಯ ಸರ್ಕಾರ ಸಹಾಯವಾಣಿ ಆರಂಭಿಸಿದೆ. ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆ-2025″ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ ಆರಂಭಿಸಲಾಗಿದ್ದು, ಸಮಾಜ ಕಲ್ಯಾಣ ಇಲಾಖೆ – ಕಂಟ್ರೋಲ್ ರೂಂ – 9482300400 ಹಾಗೂ ಜಸ್ಟಿಸ್ ನಾಗಮೋಹನ ದಾಸ್ ಆಯೋಗ (ಒಳ ಮೀಸಲಾತಿ ಕುರಿತು) – 9481359000 ಕ್ಕೆ ಸಂಪರ್ಕಿಸಬಹುದಾಗಿದೆ.ಈ ಸಹಾಯವಾಣಿಗಳು ಸಾರ್ವಜನಿಕರ ಅನುಕೂಲಕ್ಕಾಗಿ ದಿನದ 24 ಗಂಟೆಯೂ ಲಭ್ಯವಿರಲಿದೆ ಎಂದು ಪ್ರಕಟಣೆ ತಿಳಿಸಿದೆ.
ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆಯ ಮಾಹಿತಿಯನ್ನು ವೈಜ್ಞಾನಿಕವಾಗಿ ಕಡಿಮೆ ಅವಧಿಯಲ್ಲಿ ಪಡೆಯುವ ಉದ್ದೇಶದಿಂದ ಇ – ಆಡಳಿತ ಇಲಾಖೆಯು ಅಭಿವೃದ್ಧಿಪಡಿಸಿರುವ ಮೊಬೈಲ್ ಆಯಪ್ ಮೂಲಕ ಸಮೀಕ್ಷೆಯನ್ನು ಕೈಗೊಳ್ಳಲಾಗುತ್ತಿದೆ.
ಮೊಬೈಲ್ ಆಯಪ್ ಅನ್ನು ಬೆಳಗ್ಗೆ 6.30 ರಿಂದ ಸಂಜೆ 6.30ರ ವರೆಗೆ ಎನೇಬಲ್ ಮಾಡಲಾಗಿರುತ್ತದೆ. ಸದರಿ ಅವಧಿಯಲ್ಲಿ ಗಣತಿದಾರರು ಮನೆಗಳಿಗೆ ಭೇಟಿ ನೀಡಲಿದ್ದು, ಸಾರ್ವಜನಿಕರು / ಕುಟುಂಬದವರು ತಮ್ಮ ಜಾತಿಯ ಕುರಿತು ಮಾಹಿತಿಯನ್ನು ನೀಡಬೇಕು.
ಮನೆ – ಮನೆ ಸಮೀಕ್ಷೆ ಕೈಗೊಂಡ ಸಂದರ್ಭದಲ್ಲಿ ಮಾಹಿತಿ ಒದಗಿಸಲು ಸಾಧ್ಯವಾಗದೇ ಇರುವ ಪರಿಶಿಷ್ಟ ಜಾತಿಯ ಕುಟುಂಬದವರು ಸ್ವಯಂ ಪ್ರೇರಿತರಾಗಿ ವಿಶೇಷ ಶಿಬಿರಗಳಲ್ಲಿ ಭಾಗವಹಿಸಿ ಮಾಹಿತಿಯನ್ನು ಒದಗಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.