ಬೆಂಗಳೂರು : ಕೈಗೆಟುಕುವ ದರದಲ್ಲಿ ಔಷಧಿ ಜೊತೆಗೆ ಶಸ್ತ್ರ ಚಿಕಿತ್ಸಾ ಪರಿಕರಗಳನ್ನು ಬಡವರಿಗೆ ತಲುಪಿಸುವ ಉದ್ದೇಶದಿಂದ ಪ್ರಧಾನಮಂತ್ರಿ ಭಾರತೀಯ ಜನೌಷಧಿ ಕೇಂದ್ರಗಳು ಆರಂಭವಾಗಿದ್ದು ಗೊತ್ತೇ ಇದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿನ ಸಮುದಾಯ ಆರೋಗ್ಯ ಕೇಂದ್ರ, ತಾಲ್ಲೂಕು ಆಸ್ಪತ್ರೆ ಹಾಗೂ ಎಲ್ಲಾ ಜಿಲ್ಲಾ ಆಸ್ಪತ್ರೆಗಳಲ್ಲಿ ಸುಮಾರು 200 ಜನೌಷಧಿ ಮಳಿಗೆಗಳನ್ನು ಸ್ಥಾಪಿಸುವ ಕುರಿತಾಗಿ ರಾಜ್ಯ ಸರ್ಕಾರ ಇದೀಗ ಅನುಮತಿ ನೀಡಿ ಆದೇಶಿಸಿದೆ.
ಸರ್ಕಾರಿ ಆಸ್ಪತ್ರೆಗಳಲ್ಲಿಯನ ವೈದ್ಯರು ಬ್ರ್ಯಾಂಡೆಡ್ ಔಷಧಿಗಳನ್ನು ರೋಗಿಗಳಿಗೆ ಸಲಹಾ ಚೀಟಿ ರೂಪದಲ್ಲಿ ನೀಡುವುದನ್ನು ನಿಷೇಧಿಸಲಾಗಿದೆ.
ಇದಲ್ಲದೇ ಆರೋಗ್ಯ ಸಂಸ್ಥೆಗಳಲ್ಲಿ ಲಭ್ಯವಿರದ ಔಷಧಿಗಳನ್ನು ಸಂಬಂಧಿಸಿದ ವೈದ್ಯರು, ರೋಗಿಗಳಿಗೆ ನೀಡುವ ಸಲಹಾ ಚೀಟಿಗಳನ್ನು ಜೆನೆರಿಕ್ ಹೆಸರಿನಲ್ಲಿ ಬರೆಯಲು ಕಡ್ಡಾಯವಾಗಿ ಸೂಚಿಸಿ ಆದೇಶಿಸಲಾಗಿದೆ.
ಈ ಔಷಧಿಗಳನ್ನು ಆರೋಗ್ಯ ಸಂಸ್ಥೆಯ ಆವರಣದಲ್ಲಿ ಸ್ಥಾಪಿಸಿರುವ ಜನೌಷಧಿ ಮಳಿಗೆಯಲ್ಲಿ ಕಡಿಮೆ ದರದಲ್ಲಿ ಔಷಧಿ ಸಿಗುವ ಬಗ್ಗೆ ರೋಗಿಗಳಿಗೆ ವಿವರಿಸಿ ಅಲ್ಲಿಂದ ಆ ಔಷಧಿಗಳನ್ನು ಖರೀದಿಸಲು ಸಲಹೆ ನೀಡವಂತೆಯೂ ಸೂಚನೆ ನೀಡಲಾಗಿದೆ.
ಜೆನೆರಿಕ್ ಔಷಧಿಗಳು ಇತರೆ ಬ್ರ್ಯಾಂಡೆಡ್ ಔಷಧಿಯಷ್ಟೇ ಉತ್ತಮ ಗುಣಮಟ್ಟ ರೋಗನಿವಾರಕ ಸಾಮರ್ಥ್ಯ ಹೊಂದಿರುತ್ತದೆ ಎಂದು ರೋಗಿಗಳಿಗೆ ಶಿಕ್ಷಣ ಹಾಗೂ ಪ್ರಚಾರದ ಮೂಲಕ ಜಾಗೃತಿ ಮೂಡಿಸಬೇಕು ಎಂದು ಸರ್ಕಾರ ಆದೇಶದಲ್ಲಿ ಉಲ್ಲೇಖಿಸಿದೆ.




