Ad imageAd image

ಸರ್ಕಾರಿ ಕಚೇರಿಗಳಲ್ಲಿ ಧೂಮಪಾನ ಹಾಗೂ ತಂಬಾಕು ಉತ್ಪನ್ನ ಸೇವನೆ ನಿಷೇಧ : ರಾಜ್ಯ ಸರಕಾರ ಆದೇಶ

Bharath Vaibhav
ಸರ್ಕಾರಿ ಕಚೇರಿಗಳಲ್ಲಿ ಧೂಮಪಾನ ಹಾಗೂ ತಂಬಾಕು ಉತ್ಪನ್ನ ಸೇವನೆ ನಿಷೇಧ : ರಾಜ್ಯ ಸರಕಾರ ಆದೇಶ
WhatsApp Group Join Now
Telegram Group Join Now

ಬೆಂಗಳೂರು: ರಾಜ್ಯ ಸರ್ಕಾರಿ ಕಚೇರಿಗಳಲ್ಲಿ ಹಾಗೂ ಕಚೇರಿಯ ಆವರಣಗಳಲ್ಲಿ ಧೂಮಪಾನ ಹಾಗೂ ಇತರ ತಂಬಾಕು ಉತ್ಪನ್ನಗಳ ಸೇವನೆಯನ್ನು ನಿಷೇಧಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.

ಈ ಕುರಿತು ರಾಜ್ಯ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಗೆಜೆಟ್ ಅಧಿಸೂಚನೆ ಹೊರಡಿಸಿದ್ದಾರೆ.

ಧೂಮಪಾನ ಹಾಗೂ ತಂಬಾಕಿನ ಇತರ ಉತ್ಪನ್ನಗಳ ಸೇವನೆಯು ಆರೋಗ್ಯಕ್ಕೆ ಮಾರಕವಾಗಿದ್ದು, ಸಾರ್ವಜನಿಕ ಪ್ರದೇಶಗಳಲ್ಲಿ ಇಂತಹ ಉತ್ಪನ್ನಗಳ ಸೇವನೆಯನ್ನು THE CIGARETTES AND OTHER TOBACCO PRODUCTS (PROHIBITION OF ADVERTISEMENT AND REGULATION OF TRADE AND COMMERCE, PRODUCTION, SUPPLY AND DISTRIBUTION) ACT, 2003 (ಕೇಂದ್ರ ಅಧಿನಿಯಮ 34/2003)ರಲ್ಲಿ ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ಕರ್ನಾಟಕ ರಾಜ್ಯ ನಾಗರಿಕ ಸೇವಾ (ನಡತೆ) ನಿಯಮಗಳು, 2021ರ ನಿಯಮ-31ರಲ್ಲಿ ಸಾರ್ವಜನಿಕ ಸ್ಥಳದಲ್ಲಿ ಯಾವುದೇ ಮಾದಕ ಪಾನೀಯ ಅಥವಾ ಮಾದಕ ವಸ್ತುವನ್ನು ಸೇವಿಸುವುದನ್ನು ಕೂಡ ನಿಷೇಧಿಸಲಾಗಿದೆ.

ಶಾಸನಾತ್ಮಕ ಎಚ್ಚರಿಕೆಗಳ ಹೊರತಾಗಿಯೂ ಸರ್ಕಾರಿ ಕಚೇರಿಗಳಲ್ಲಿ ಹಾಗೂ ಕಚೇರಿಯ ಆವರಣದಲ್ಲಿ ತಂಬಾಕು ಉತ್ಪನ್ನಗಳ ಸೇವನೆ ಆಗುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿರುತ್ತದೆ.

ಈ ಹಿನ್ನಲೆಯಲ್ಲಿ ಸಿಬ್ಬಂದಿಗಳ ಆರೋಗ್ಯದ ಹಿತದೃಷ್ಟಿಯಿಂದ ಹಾಗೂ ಪರೋಕ್ಷ ಧೂಮಪಾನದಿಂದ ಸಾರ್ವಜನಿಕರನ್ನು ಹಾಗೂ ಸರ್ಕಾರಿ ಸಿಬ್ಬಂದಿಗಳನ್ನು ರಕ್ಷಿಸುವ ಉದ್ದೇಶದಿಂದ, ಯಾವುದೇ ಸರ್ಕಾರಿ ನೌಕರನು ಸರ್ಕಾರಿ ಕಚೇರಿಗಳಲ್ಲಿ ಹಾಗೂ ಕಚೇರಿ ಆವರಣದಲ್ಲಿ ಧೂಮಪಾನ ಸೇರಿದಂತೆ ಯಾವುದೇ ತಂಬಾಕು ಉತ್ಪನ್ನಗಳ ಸೇವನೆ ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಈ ಸಂಬಂಧ ಎಚ್ಚರಿಕೆಯ ಫಲಕವನ್ನು ಕಚೇರಿಯ ಸೂಕ್ತ ಸ್ಥಳಗಳಲ್ಲಿ ಪ್ರದರ್ಶಿಸತಕ್ಕದ್ದು.

ಈ ಸೂಚನೆಗಳನ್ನು ಉಲ್ಲಂಘಿಸಿ ಯಾವುದೇ ಸರ್ಕಾರಿ ನೌಕರ ಕಚೇರಿಯಲ್ಲಿ ಅಥವಾ ಕಚೇರಿಯ ಆವರಣದಲ್ಲಿ ಧೂಮಪಾನ ಮಾಡುವುದು ಮತ್ತು ಯಾವುದೇ ತಂಬಾಕು ಉತ್ಪನ್ನಗಳನ್ನು (ಗುಟ್ಕಾ, ಪಾನ್ ಮಸಾಲ, ಹೊಗೆಸೊಪ್ಪು ಇತ್ಯಾದಿ) ಸೇವಿಸುವುದು ಕಂಡುಬಂದಲ್ಲಿ ಅಂತಹ ನೌಕರರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!