ತುರುವೇಕೆರೆ : ಪಟ್ಟಣದ 7 ನೇ ವಾರ್ಡ್ ಸರಸ್ವತಿಪುರಂನಲ್ಲಿ ವ್ಯಕ್ತಿಯೊಬ್ಬರು ಪಿಒಪಿ ತಯಾರಿಕಾ ಘಟಕ ಸ್ಥಾಪಿಸಿದ್ದು, ಘಟಕದಿಂದ ಕೆಮಿಕಲ್ ವಾಸನೆ, ಅತಿಯಾದ ಶಬ್ದದಿಂದ ಕಿರಿಕಿರಿ ಉಂಟಾಗುತ್ತಿದೆ. ಇದಲ್ಲದೆ ಅಕ್ಕಪಕ್ಕದ ನಿವಾಸಿಗಳಲ್ಲಿ ಅನಾರೋಗ್ಯಕ್ಕೆ ಕಾರಣವಾಗಿದೆ. ಕೂಡಲೇ ಘಟಕ ಬೇರೆಡೆಗೆ ಸ್ಥಳಾಂತರಿಸುವಂತೆ ಘಟಕದ ಮಾಲೀಕರಿಗೆ ಸೂಚಿಸಬೇಕು, ಇಲ್ಲವಾದಲ್ಲಿ ಘಟಕದ ಮಾಲೀಕರ ಮೇಲೆ ಕ್ರಮ ಕೈಗೊಂಡು ಘಟಕ ನಿಲ್ಲಿಸಬೇಕೆಂದು ವಾರ್ಡಿನ ನಿವಾಸಿಗಳು ಪಟ್ಟಣ ಪಂಚಾಯ್ತಿ ಅಧ್ಯಕ್ಷೆ ಸ್ವಪ್ನ ನಟೇಶ್ ಹಾಗೂ ಮುಖ್ಯಾಧಿಕಾರಿ ಶ್ರೀನಾಥ್ ಬಾಬು ಅವರಿಗೆ ಮನವಿ ಸಲ್ಲಿಸಿದರು.
ಈ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿದ ನಿವಾಸಿಗಳಾದ ಪದ್ಮಾವತಿ ಕಂಚೀರಾಯಪ್ಪ, ನಮ್ಮ ಮನೆಯ ಎದುರಿಗೆ ಪಿಒಪಿ ತಯಾರಿಕಾ ಘಟಕವನ್ನು ರಫೀಕ್ ಅಹಮದ್ ಎಂಬುವವರು ಸ್ಥಾಪಿಸಿದ್ದಾರೆ. ಘಟಕದಲ್ಲಿ ಸಿಮೆಂಟ್ ಇನ್ನಿತರ ಕೆಮಿಕಲ್ ಬಳಸಿ ಮನೆಗೆ ಬೇಕಾದ ಅಲಂಕಾರಿಕ ಪಿಒಪಿ ವಸ್ತುಗಳನ್ನು ತಯಾರಿಸಲಾಗುತ್ತಿದೆ. ಘಟಕದಿಂದ ನಮಗೂ ಸೇರಿದಂತೆ ಅಕ್ಕಪಕ್ಕದ ನಿವಾಸಿಗಳಿಗೆ ಬಹಳ ತೊಂದರೆಯುಂಟಾಗುತ್ತಿದೆ. ಘಟಕದಿಂದ ಬರುವ ಕೆಮಿಕಲ್ನ ಘಾಟು ಗಾಳಿಯಲ್ಲಿ ಸೇರಿ ನೇರ ನಮ್ಮ ದೇಹ ಸೇರುತ್ತಿದೆ. ಇದಲ್ಲದೆ ದಿನವಿಡೀ ಘಟಕದಲ್ಲಿ ಮಿಕ್ಸಿಂಗ್ ಹಾಗೂ ಕಟಿಂಗ್ ಕೆಲಸ ನಡೆಯುವುದರಿಂದ ಶಬ್ಧ ಮಾಲಿನ್ಯದಿಂದ ಮನೆಯೊಳಗೆ ಇರಲು ಸಾಧ್ಯವಾಗುತ್ತಿಲ್ಲ. ರಾತ್ರಿ ವೇಳೆ ಬಹಳ ಹೊತ್ತಿನವರೆಗೆ ಮಿಕ್ಸಿಂಗ್ ಮಾಡುವ ಶಬ್ಧ ಕೇಳಿಸುತ್ತದೆ. ರಾತ್ರಿ ನಿದ್ದೆ ಮಾಡಲು ಆಗುತ್ತಿಲ್ಲ. ಪ್ರತಿಯೊಬ್ಬರು ಒಂದೊಂದು ವೃತ್ತಿಯನ್ನು ಅವಲಂಬಿಸಿದ್ದಾರೆ. ನಾವು ಕೆಲಸಕ್ಕೆ ಹೋಗಿ ಬಂದು ಧಣಿದಿರುತ್ತೇವೆ. ನೆಮ್ಮದಿಯಾಗಿ ನಿದ್ದೆ ಮಾಡಲು ಸಹ ಈ ಶಬ್ಧದಿಂದ ಆಗುತ್ತಿಲ್ಲ ಎಂದು ದೂರಿದರು.
ಘಟಕದ ಅಕ್ಕಪಕ್ಕದಲ್ಲಿ ವಾಸದ ಮನೆಗಳೇ ಇದ್ದು, ಮನೆಗಳಲ್ಲಿ ಮಹಿಳೆಯರು, ಮಕ್ಕಳು, ವಯೋವೃದ್ಧರು ಇದ್ದಾರೆ. ಇತ್ತೀಚೆಗೆ ಚಿಕ್ಕ ವಯಸ್ಸಿಗೆ ಹೃದಯಾಘಾತ ಸಮಸ್ಯೆಯಿಂದ ಮರಣ ಹೊಂದುತ್ತಿರುವ ಬಗ್ಗೆ ಮಾಧ್ಯಮಗಳಲ್ಲಿ ಬರುತ್ತಿದೆ. ಈ ಘಟಕದ ಕೆಮಿಕಲ್ ಘಾಟು ದೇಹದ ಶ್ವಾಸಕೋಶಕ್ಕೆ ಸೇರಿ ಪ್ರಾಣಹಾನಿಗಳಾಗುವ ಸಾಧ್ಯತೆಗಳನ್ನೂ ತಳ್ಳಿಹಾಕುವಂತಿಲ್ಲ. ಘಟಕದಿಂದಾಗಿ ಸುತ್ತಮುತ್ತಲಿನ ಮಕ್ಕಳು, ಕುಟುಂಬಸ್ಥರಲ್ಲಿ ನೆಗಡಿ, ಕೆಮ್ಮು, ಜ್ವರ, ಅಲರ್ಜಿ ಮುಂತಾದ ಸಮಸ್ಯೆಗಳು ಬರುತ್ತಲೇ ಇದೆ. ವಾಸ್ತವವಾಗಿ ವಾಸದ ಮನೆಗಳಿರುವ ಕಡೆ ಈ ರೀತಿಯ ಉದ್ಯಮಕ್ಕೆ ಅವಕಾಶವಿಲ್ಲ. ಆದರೂ ಇಲ್ಲಿ ಘಟಕ ಸ್ಥಾಪಿಸಿದ್ದು, ನಮಗೆಲ್ಲ ಬಹಳ ತೊಂದರೆಯಾಗಿದೆ. ಘಟಕ ನಿಲ್ಲಿಸುವಂತೆ ಈಗಾಗಲೇ ಕಳೆದ 2022 ರಿಂದ ಪಟ್ಟಣ ಪಂಚಾಯ್ತಿಗೆ ಅರ್ಜಿ ನೀಡುತ್ತಲೇ ಬಂದಿದ್ದೇವೆ. ಆದರೂ ಪ್ರಯೋಜನವಾಗಿಲ್ಲ. ಕೂಡಲೇ ಪಟ್ಟಣ ಪಂಚಾಯ್ತಿ ಕ್ರಮ ಕೈಗೊಂಡು ಘಟಕ ಸ್ಥಳಾಂತರ ಅಥವಾ ನಿಲ್ಲಿಸದಿದ್ದರೆ ವಾರ್ಡಿನ ಮಹಿಳೆಯರೆಲ್ಲಾ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ 7 ನೇ ವಾರ್ಡ್ ನಿವಾಸಿಗಳಾದ ಕಂಚೀರಾಯಪ್ಪ, ಮಾಸ್ತಿಗೌಡ, ಎಂ.ಬಿ.ಹರೀಶ್, ಸುರೇಶ್, ಆನಂದ್ ಗೌಡ, ಪ್ರೇಮಾ ಸತೀಶ್, ರೂಪಾ ಮಂಜಣ್ಣ, ಮಂಜಮ್ಮ ಮುಂತಾದವರು ಉಪಸ್ಥಿತರಿದ್ದರು.
ವರದಿ : ಗಿರೀಶ್ ಕೆ ಭಟ್




