ರೋಣ:ರಸಗೊಬ್ಬರ, ಕೀಟನಾಶಕ, ಬೀಜಗಳನ್ನು ಆಕ್ರಮವಾಗಿ ದಾಸ್ತಾನು ಮಾಡುವುದಾಗಲಿ, ಅಧಿಕ ದರಕ್ಕೆ ಮಾರಾಟ ಮಾಡುವುದಾಗಲಿ ಕಂಡು ಬಂದಲ್ಲಿ ಅಂತಹ ಮಾರಾಟ ಮಳಿಗೆಗಳ ಮಾಲೀಕರ ವಿರುದ್ಧ ಯಾವುದೇ ಮುಲಾಜಿಲ್ಲದೆ ಕಠಿಣ ಕ್ರಮ ಜರುಗಿಸಿ ಎಂದು ಶಾಸಕ ಜಿ.ಎಸ್. ಪಾಟೀಲ ಕೃಷಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಪಟ್ಟಣದ ಎಪಿಎಂಸಿ ಆವರಣದಲ್ಲಿನ ರೈತ ಸಂಪರ್ಕ ಕೇಂದ್ರದಲ್ಲಿ ರವಿವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಖಾದ್ಯ ತೈಲ ಅಭಿಯಾನ ಯೋಜನೆಯಡಿ 2025-26ನೇ ಸಾಲಿನ ಹಿಂಗಾರು ಹಂಗಾಮಿನ ಬಿತ್ತನೆ ಬೀಜ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು
ರೈತರೊಬ್ಬರು ದೂರು ನೀಡಿ ಕೆಲವರು ಹೆಚ್ಚಿನ ಬೆಲೆಯಲ್ಲಿ ರೈತರಿಗೆ ಗೊಬ್ಬರ ಮಾರಾಟ ಮಾಡುತ್ತಿದ್ದಾರೆ ಎಂದು ದೂರಿದ ಹಿನ್ನೆಲೆಯಲ್ಲಿ ಶಾಸಕರು ಕೃಷಿ ಇಲಾಖೆ ಅಧಿಕಾರಿಗಳಿಗೆ ಈ ಬಗ್ಗೆ ಕ್ರಮ ಜರುಗಿಸಲು ಸಂಪೂರ್ಣ ಅಧಿಕಾರ ನೀಡಿದರು.
ಸಹಾಯಕ ಕೃಷಿ ನಿರ್ದೇಶಕ ಎಸ್.ಎಫ್, ತಹಶೀಲ್ದಾರ್ ಮಾತನಾಡಿ, ಹಿಂಗಾರು ಹಂಗಾಮಿಗಾಗಿ ಬಿತ್ತನೆ ಬೀಜಗಳನ್ನು ಈಗಾಗಲೇ ಸಂಗ್ರಹಿಸಲಾಗಿದೆ. ಮುಂಗಾರು ಹಂಗಾಮಿನಲ್ಲಿ ರೋಣ ತಾಲೂಕಲ್ಲಿ 27500 ಹೆಕ್ಟೇರ್‌ಬೆಳೆ ಹಾನಿಯಾಗಿದೆ. ಜಂಟಿ ಸಮೀಕ್ಷೆ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ.
ಗಜೇಂದ್ರಗಡ ತಾಲೂಕಲ್ಲಿ 13700 ಹೆಕ್ಟೇರ್‌ಬೆಳೆ ಹಾನಿಯಾಗಿದೆ. ಬೆಳೆ ಹಾನಿ ಸರ್ವೇ ಬಿಟ್ಟು ಹೋದ ಜಮೀನಿನ ಆಕ್ಷೇಪಣೆಗೆ ಗ್ರಾಪಂ ಮಟ್ಟದಲ್ಲಿ ಡಿಸ್ ಪ್ಲೇ ಪ್ರದರ್ಶಿಸಿ ಹೆಸರಿಲ್ಲದವರಿಂದ ಅರ್ಜಿ ಕರೆಯಲಾಗಿತ್ತು ಎಂದು ಕೃಷಿ ಅಧಿಕಾರಿ ಸಬೂಬು ನೀಡಿದರು. ಆದರೆ ಶಾಸಕರು ಜಿಪಿಎಸ್ ಬಿಟ್ಟು ಹೋಗಿದ್ದು ಏಕೆ ಉತ್ತರಿಸಿ ಎಂದು ಪಟ್ಟು ಹಿಡಿದರು. ರೈತರಿಗೆ ಈ ಬಗ್ಗೆ ಮಾಹಿತಿಯೇ ಇಲ್ಲ ಎಂದು ಕೆಲ ರೈತರು ಆರೋಪಿಸಿದರು. ತಾಲ್ಲೂಕಿನ ವಿವಿಧ ಗ್ರಾಮಗಳ ರೈತರು, ಕೃಷಿ.ತೋಟಗಾರಿಕೆ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.




