ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ವರ್ಷಗಳಿಂದ ಕಾಡುತ್ತಿರುವ ಕಸದ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡು ಹಿಡಿಯಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ(GBA) ಹೊಸ ಮಾರ್ಗ ಸೂಚಿಗಳನ್ನು ಜಾರಿಗೆ ತಂದಿದೆ, ಈ ಹೊಸ ನಿಯಮಗಳಂತೆ ಇನ್ನೂ ಮುಂದೆ ಹಸಿ ಹಾಗೂ ಒಣ ತ್ಯಾಜ್ಯವನ್ನು ಬೇರೆ ಬೇರೆ ವಿಂಗಡಿಸಿದ ಮನೆಗಳಿಂದ ಮಾತ್ರ ಕಸ ಸಂಗ್ರಹಿಸಲಾಗುತ್ತದೆ, ನಿಯಮ ಉಲ್ಲಂಘಿಸಿದರೆ ದಂಡ ಹಾಕುವುದು ಗ್ಯಾರಂಟಿ ಎಂದು GBA ಸ್ಪಷ್ಟ ಎಚ್ಚರಿಕೆ ನೀಡಿದೆ.
ನಗರದಲ್ಲಿ ಹಬ್ಬ – ಹರಿದಿನಗಳು ಮತ್ತು ಮಾರುಕಟ್ಟೆ ಪ್ರದೇಶಗಳಲ್ಲಿ ತ್ಯಾಜ್ಯ ಹೆಚ್ಚಾಗುವ ಕಾರಣ ಸಮಸ್ಯೆ ತೀವ್ರವಾಗುತ್ತಿತ್ತು, ಈ ಹಿನ್ನೆಲೆ ಕಸ ವಿಲೇವಾರಿ ವ್ಯವಸ್ಥೆಯನ್ನು ಶಿಸ್ತಿನೊಳಗೆ ತರಲು ‘ಜಿಬಿಎ’ ಹೊಸ ರೂಲ್ಸ್ ಕಡ್ಡಾಯಗೊಳಿಸಿದೆ, ಜಿಬಿಎ ವ್ಯಾಪ್ತಿಯಲ್ಲಿರುವ ಮನೆಗಳಿಂದ ಮಿಶ್ರ ಕಸವನ್ನು ಸ್ವೀಕರಿಸಬಾರದು ಎಂಬ ಷರತ್ತನ್ನು ಗುತ್ತಿಗೆದಾರರಿಗೆ ವಿಧಿಸಲಾಗಿದೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯ 28 ವಿಧಾನಸಭಾ ಕ್ಷೇತ್ರಗಳಲ್ಲಿ ಕಸ ಸಂಗ್ರಹಣೆ ತ್ಯಾಜ್ಯ ವರ್ಗಾವಣೆ ಮತ್ತು ರಸ್ತೆ ಗುಡಿಸುವ ಕಾರ್ಯಗಳಿಗೆ ಸಂಬಂಧಿಸಿದಂತೆ ₹544.91ಕೋಟಿ ಮೊತ್ತದ 33ಪ್ಯಾಕೇಜ್ ಗಳಿಗೆ ಟೆಂಡರ್ ಕರೆಯಲಾಗಿದೆ. ಈ ಟೆಂಡರ್ ಪಡೆದ ಗುತ್ತಿಗೆದಾರರು ಪ್ರತಿದಿನ ಬೆಳಿಗ್ಗೆ 6-30ಗಂಟೆ ಒಳಗೆ ಮನೆಗಳಿಗೆ ಭೇಟಿ ನೀಡಿ ಕಸ ಸಂಗ್ರಹಿಸಬೇಕು, ಈ ವೇಳೆ ಹಸಿ ಮತ್ತು ಒಣ ಕಸ ಬೇರೆ ಬೇರೆ ಮಾಡಿದ ಕಸ ಮಾತ್ರ ಸ್ವೀಕರಿಸಬೇಕು ಮನೆ ಮಂದಿ ಕಸವನ್ನು ವಿಂಗಡಿಸದೆ ನೀಡಿದರೆ ಅದನ್ನು ಸಂಗ್ರಹಿಸಬಾರದು ಎಂಬುದು ನಿಯಮ ಇದೆ.
ಮಿಶ್ರ ಕಸ ನೀಡಿದ ಮನೆಗಳ ಕುರಿತು ಫೊಟೋ, ವೀಡಿಯೋ ದಾಖಲಿಸಿ ಸಂಬಂಧ ಪಟ್ಟ ಬಿಎಸ್ ಡಬ್ಲ್ಯೂ, ಎಂ ಎಲ್ ಅಧಿಕಾರಿಗಳಿಗೆ ಮಾಹಿತಿ ನೀಡಬೇಕಾಗುತ್ತದೆ.ನಿಯಮ ಉಲ್ಲಂಘಿಸಿ ಮಿಶ್ರ ತ್ಯಾಜ್ಯ ಸಂಗ್ರಹಿಸಿದ ಗುತ್ತಿಗೆದಾರರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗುವ ಸಾಧ್ಯತೆಯೂವಿದೆ ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರ ತಿಳಿಸಿದೆ.

ಬೆಳಿಗ್ಗೆ 10ರಿಂದ ಮದ್ಯಾಹ್ನ 1ಗಂಟೆಯೊಳಗೆ ತ್ಯಾಜ್ಯ ಸಂಗ್ರಹ ಪ್ರಕ್ರಿಯೆ ಆರಂಭವಾಗಬೇಕು, ಗುತ್ತಿಗೆ ಷರತ್ತುಗಳನ್ನು ಪಾಲಿಸದಿದ್ದರೆ ಮೊದಲಿಗೆ 90ದಿನಗಳಾವಧಿ ನೀಡಲಾಗುತ್ತಿದೆ. ಈ ಅವಧಿಯಲ್ಲೂ ಸುಧಾರಣೆ ಆಗದಿದ್ದರೆ ಗುತ್ತಿಗೆ ರದ್ದಾಗಲಿದೆ, ಮನೆಯಿಂದ ಪ್ರತಿದಿನ ಕಸ ಸಂಗ್ರಹ ವಾಗುತ್ತಿಲ್ಲ ಎಂಬ ಬಗ್ಗೆ 10ಕ್ಕಿಂತ ಕಡಿಮೆ ದೂರುಗಳು ಬಂದರೆ ದಂಡ ವಿಧಿಸುವುದಿಲ್ಲ, ಆದರೆ 10ರಿಂದ 500 ದೂರುಗಳು ಬಂದಲ್ಲಿ₹ 100 ದಂಡ ವಿಧಿಸಲಾಗುತ್ತದೆ. ಅದೇ ರೀತಿ 500ಕ್ಕಿಂತ ಹೆಚ್ಚು ದೂರುಗಳು ಸತತವಾಗಿ ಮೂರು ತಿಂಗಳು ದಾಖಲಾಗಿದರೆ ಪ್ರತಿ ದೂರಿಗೂ₹100ದಂಡ ಹಾಕಲಾಗುತ್ತದೆ.
ಅಕ್ರಮ ತ್ಯಾಜ್ಯ ವಿಲೇವಾರಿಗೆ ಭಾರಿ ದಂಡ:
ಗ್ರೇಟರ್ ಬೆಂಗಳೂರು ಪ್ರಾಧಿಕಾರ ನಿಯಮಗಳ ಪ್ರಕಾರ ಬೆಳಗ್ಗೆ 11ರಿಂದ ಮದ್ಯಾಹ್ನ 2ಗಂಟೆಯೊಳಗೆ ಪಾದಚಾರಿ ಮಾರ್ಗ,ರಸ್ತೆ ಮತ್ತು ಮೇಲ್ಸೇತುವೆಗಳ ಸ್ವಚ್ಚತೆ ಪೂರ್ಣಗೊಳ್ಳಬೇಕು, ಎಲ್ಲೆಂದರಲ್ಲಿ ಕಸ ಸುರಿದರೆ ಗುತ್ತಿಗೆದಾರರಿಗೆ ₹50,000ದಂಡದ ಜೊತೆಗೆ ಪೊಲೀಸ್ ಪ್ರಕರಣವೂ ದಾಖಲಾಗುತ್ತದೆ. ಇದಲ್ಲದೆ ಕಸ ಸಂಗ್ರಹಣೆಯಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿಯ ಆಧಾರ್ ಕಾರ್ಡ್,ರೇಷನ್ ಕಾರ್ಡ್ ಸೇರಿದಂತೆ ಅಗತ್ಯ ದಾಖಲೆಗಳನ್ನು ಕಡ್ಡಾಯವಾಗಿ ಗುತ್ತಿಗೆದಾರರು ಹೊಂದಿರಬೇಕು. ಸಿಬ್ಬಂದಿಯ ಹಾಜರಾತಿಯನ್ನು ಬಯೋಮೆಟ್ರಿಕ್ ವ್ಯವಸ್ಥೆಯಲ್ಲಿ ದಾಖಲಿಸುವುದು ಕಡ್ಡಾಯವಾಗಿದೆ ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರ ಮೂಲಗಳು ತಿಳಿಸಿವೆ.
ವರದಿ: ಅಯ್ಯಣ್ಣ ಮಾಸ್ಟರ್




