ಸಿರುಗುಪ್ಪ : ನಗರದ ಸರ್ಕಾರಿ ನೌಕರರ ಭವನದ ಸಭಾಂಗಣದಲ್ಲಿ ಪರಿಶಿಷ್ಟ ಜಾತಿ ಅಲೆಮಾರಿ ಬುಡಕಟ್ಟು ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಅಲೆಮಾರಿ ಸಮುದಾಯಗಳ ಒಳಮೀಸಲಾತಿ ಹೋರಾಟ, ಸಮಿತಿಯಿಂದ ಬೆಳಗಾವಿ ಸುವರ್ಣ ಸೌಧ ಚಲೋ ಕುರಿತು ಸುದ್ದಿಗೋಷ್ಟಿ ನಡೆಯಿತು.
ಪರಿಶಿಷ್ಟ ಅಲೆಮಾರಿ ಸಮುದಾಯಗಳ ಮಹಾಸಭಾದ ಜಿಲ್ಲಾಧ್ಯಕ್ಷ ಶಿವಕುಮಾರ್ ಮಾತನಾಡಿ ಅಗಸ್ಟ್, 1 2024ರಂದು ಸರ್ವೋಚ್ಚ ನ್ಯಾಯಾಲಯದಲ್ಲಿ ಒಳ ಮೀಸಲಾತಿಯ ಐತಿಹಾಸಿಕ ತೀರ್ಪನ್ನು ಸ್ವಾಗತಿಸುತ್ತೇವೆ.
ತೀರ್ಪಿನಲ್ಲಿರುವ ಸೂಕ್ತ ಪ್ರಾತಿನಿಧ್ಯವನ್ನು ಶಿಕ್ಷಣ, ಸರ್ಕಾರಿ ಸೇವೆಗಳಲ್ಲಿ ಪಡೆಯದೇ ಇರುವ ಪರಿಶಿಷ್ಟ ಜಾತಿಯಲ್ಲಿನ 49 ಸೂಕ್ಷ್ಮ ಮತ್ತು ಅತಿಸೂಕ್ಷ ಅಲೆಮಾರಿ ಸಮುದಾಯಗಳಿಗೆ ಶೇ.3ರ ಒಳ ಮೀಸಲಾತಿಯನ್ನು ಸರ್ಕಾರ ಕಲ್ಪಿಸಬೇಕು.
ಅಲೆಮಾರಿ ಆಯೋಗವನ್ನು ಶೀಘ್ರವಾಗಿ ಸ್ಥಾಪಿಸುವುದು, ರಾಜ್ಯದ ಹಂಪಿ ಕನ್ನಡ ವಿಶ್ವ ವಿದ್ಯಾಲಯದಲ್ಲಿ ಅಲೆಮಾರಿ ಬುಡಕಟ್ಟು ಅಧ್ಯಯನ ಕೇಂದ್ರ ತೆರೆಯುವುದು.
ವಿಧಾನಪರಿಷತ್ತಿಗೆ ನಡೆಯುವ ಆಯ್ಕೆಗಳಲ್ಲಿ ಸಮಾಜದಲ್ಲಿ ಶೈಕ್ಷಣಿಕವಾಗಿ, ಆರ್ಥಿಕವಾಗಿ ಹಿಂದುಳಿದಿರುವ ಸೂಕ್ಷ ಮತ್ತು ಅತಿಸೂಕ್ಷ್ಮ ಅಲೆಮಾರಿ ಸಮುದಾಯದ ಒಬ್ಬ ವ್ಯಕ್ತಿಯನ್ನಾದರೂ ಸದಸ್ಯರಾಗಿ ಆಯ್ಕೆ ಮಾಡಿದಲ್ಲಿ ನಮ್ಮ ಜನಾಂಗದ ಪರವಾಗಿ ಧ್ವನಿಯೆತ್ತಲು ಸಾಧ್ಯವಾಗುತ್ತದೆ.
ಈ ಎಲ್ಲಾ ಹಕ್ಕೋತ್ತಾಯಕ್ಕೆಂದು ಪರಿಶಿಷ್ಟ ಜಾತಿ 49 ಅಲೆಮಾರಿ ಸಮುದಾಯಗಳ ಮಹಾ ಒಕ್ಕೂಟದಿಂದ ಇದೇ ಮಾಹೆ 18 ರಂದು ಬೆಳಗಾವಿಯ ಸುರ್ವಣ ಸೌಧ ಚಲೋ ಹಮ್ಮಿಕೊಳ್ಳಲಾಗಿದ್ದು, ಅಲೆಮಾರಿ ಸಮುದಾಯದಡಿ ಬರುವ ಬುಡ್ಗ ಜಂಗಮ, ಸಿಂದೋಳ್, ದಕ್ಕಲಿಗ, ಹಂಡಿಜೋಗಿ ಜನಾಂಗದ ಎಲ್ಲರೂ ಭಾಗವಹಿಸಬೇಕೆಂದು ತಿಳಿಸಿದರು.
ಇದೇ ವೇಳೆ ಪರಿಶಿಷ್ಟ ಅಲೆಮಾರಿ ಸಮುದಾಯಗಳ ಮಹಾಸಭಾದ ತಾಲೂಕಾಧ್ಯಕ್ಷ ರಾಮಚಂದ್ರ, ಉಪಾಧ್ಯಕ್ಷ ಹುಲುಗಣ್ಣ, ಸಂಘಟನಾ ಕಾರ್ಯದರ್ಶಿ ಕೆ.ಈರಣ್ಣ, ಸಂಚಾಲಕ ಹನುಮಂತಪ್ಪ, ಮುಖಂಡರಾದ ಜಂಬಣ್ಣ, ರಾಘವೇಂದ್ರ, ಉರುಕುಂದಿ, ಮಲ್ಲಿಕಾರ್ಜುನ, ಅಂಜಿನಪ್ಪ ಇನ್ನಿತರರಿದ್ದರು.
ವರದಿ : ಶ್ರೀನಿವಾಸ ನಾಯ್ಕ