ಗುರುಮಠಕಲ್ : ತಾಲೂಕಿನ ಗರಾಜಕೋಟ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ದಿನೇದಿನೇ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಗ್ರಾಮಸ್ಥರು ತೀವ್ರ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಗ್ರಾಮ ಪಂಚಾಯತಿ ವಾರ್ಡ್ ನಂಬರ್–2 ರಲ್ಲಿ ಕಳೆದ ಒಂದು ತಿಂಗಳಿನಿಂದ ಕುಡಿಯುವ ನೀರಿನ ಪೂರೈಕೆ ಸಂಪೂರ್ಣವಾಗಿ ಸ್ಥಗಿತಗೊಂಡಿದ್ದರೂ, ಸಂಬಂಧಪಟ್ಟ ಅಭಿವೃದ್ಧಿ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯತ್ ಸಿಬ್ಬಂದಿ ವರ್ಗ ತೀವ್ರ ನಿರ್ಲಕ್ಷ್ಯ ವಹಿಸಿರುವುದು ಸಾರ್ವಜನಿಕರಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.

ನೀರಿನ ಸಮಸ್ಯೆ ಕುರಿತು ಅಧಿಕಾರಿಗಳನ್ನು ಸಂಪರ್ಕಿಸಿದರೆ, “ಇದು ನಮ್ಮ ಸಂಬಂಧದ ವಿಷಯವಲ್ಲ” ಎಂಬ ರೀತಿಯ ನಿರ್ಲಕ್ಷ್ಯಪೂರ್ಣ ಉತ್ತರ ನೀಡಲಾಗುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಮೂಲಭೂತ ಅಗತ್ಯವಾದ ಕುಡಿಯುವ ನೀರನ್ನೇ ಒದಗಿಸಲು ವಿಫಲವಾದ ಗ್ರಾಮ ಪಂಚಾಯತಿಯ ನಡೆ ಜನಸಾಮಾನ್ಯರ ಸಹನೆಯನ್ನು ಮೀರಿಸಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ವಾರ್ಡ್ ನಂಬರ್–2 ರ ಮಹಿಳೆಯರು ಖಾಲಿ ಕೊಡಗಳನ್ನು ಕೈಯಲ್ಲಿ ಹಿಡಿದು ಗ್ರಾಮ ಪಂಚಾಯತ್ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಕುಡಿಯುವ ನೀರಿನ ಕೊರತೆಯಿಂದ ದಿನನಿತ್ಯದ ಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದ್ದು, ಮಹಿಳೆಯರು ಹಾಗೂ ಮಕ್ಕಳು ಹೆಚ್ಚಿನ ತೊಂದರೆ ಅನುಭವಿಸುವಂತಾಗಿದೆ ಎಂದು ಪ್ರತಿಭಟನಾಕಾರರು ತಮ್ಮ ನೋವನ್ನು ಹೊರಹಾಕಿದರು.
“ತಕ್ಷಣವೇ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸದಿದ್ದರೆ, ಮುಂದಿನ ದಿನಗಳಲ್ಲಿ ಗ್ರಾಮ ಪಂಚಾಯತ್ ಕಚೇರಿಗೆ ಮುತ್ತಿಗೆ ಹಾಕಿ ಭಾರೀ ಪ್ರತಿಭಟನೆ ನಡೆಸಲಾಗುವುದು” ಎಂದು ವಾರ್ಡ್ ನಂಬರ್ 02 ರ ಮಹಿಳೆಯರು ಎಚ್ಚರಿಕೆ ನೀಡಿದರು.
ಕುಡಿಯುವ ನೀರಿನಂತಹ ಮೂಲಭೂತ ಸೌಕರ್ಯ ಒದಗಿಸಲು ಅಸಮರ್ಥರಾದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದರು.
ಒಟ್ಟಾರೆ, ಗರಾಜಕೋಟ ಗ್ರಾಮದಲ್ಲಿ ಉಂಟಾಗಿರುವ ಕುಡಿಯುವ ನೀರಿನ ಸಮಸ್ಯೆ ಗ್ರಾಮ ಪಂಚಾಯತ್ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ನೇರ ಸಾಕ್ಷಿಯಾಗಿದ್ದು, ಜಿಲ್ಲಾಡಳಿತ ತಕ್ಷಣ ಮಧ್ಯಪ್ರವೇಶಿಸಿ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಬೇಕೆಂಬುದು ಗ್ರಾಮಸ್ಥರ ತೀವ್ರ ಆಗ್ರಹವಾಗಿದೆ.
ವರದಿ : ರವಿ ಬುರನೋಳ್




