ಹಾಸನ: ನಿನ್ನೆ ಏಪ್ರಿಲ್ 8 ರಂದು ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿತ್ತು. ಪರೀಕ್ಷೆಯಲ್ಲಿ 79% ಅಂಗ ಗಳಿಸಿದರೂ ವಿದ್ಯಾರ್ಥಿಯೊಬ್ಬ ಕಡಿಮೆ ಅಂಕ ಬಂತು ಎಂದು ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ಹಾಸನ ಜಿಲ್ಲೆಯ ಅರಸೀಕೆರೆಯಲ್ಲಿ ನಡೆದಿದೆ.
ಇಲ್ಲಿನ ಶಿಕ್ಷಕ ಪ್ರಕಾಶ್ ಅವರ ಪುತ್ರ 18 ವರ್ಷದ ಮನೋಜ್ ಆತ್ಮಹತ್ಯೆಗೆ ಶರಣಾಗಿರುವ ವಿದ್ಯಾರ್ಥಿ. ಮನೋಜ್ ಅರಸೀಕೆರೆ ನಗರದ ಅನಂತ ಪಿಯು ಕಾಲೇಜಿನಲ್ಲಿ ಪಿಸಿಎಂಬಿ ಸೈನ್ಸ್ ವಿಭಾಗದಲ್ಲಿ ಅಭ್ಯಾಸ ಮಾಡುತ್ತಿದ್ದ. ಪರೀಕ್ಷೆಯಲ್ಲಿ ಮನೋಜ್ 79% ಅಂಕ ಗಳಿಸಿದ್ದಾನೆ.
ಆದರೂ ಅಂಕ ಕಡಿಮೆ ಬಂತೆಂದು ನೊಂದ ಆತ ನಿನ್ನೆ ರಾತ್ರಿ ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮನೋಜ್ ಕಾಲೇಜಿನ ಅತ್ಯಂತ ಪ್ರತಭಾನ್ವಿತ ವಿದ್ಯಾರ್ಥಿಯಾಗಿದ್ದ. ಸದಾ ಓದುವುದರಲ್ಲಿ ಟಾಪರ್ ಕೂಡಾ ಆಗಿದ್ದ. ಎಸ್‌ಎಸ್‌ಎಲ್‌ಸಿಯಲ್ಲಿ 98% ಅಂಕ ಗಳಿಸುವ ಮೂಲಕ ಇಡೀ ತಾಲೂಕಿನಲ್ಲಿ ಗಮನಸೆಳೆದಿದ್ದ. ಆದರೆ ಇದೀಗ ಆತನ ಆತ್ಮಹತ್ಯೆ ಸ್ಥಳೀಯರನ್ನು ಆಘಾತಕ್ಕೆ ತಳ್ಳಿದೆ.
ಅರಸೀಕೆರೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತದೇಹವನ್ನು ಅರಸೀಕೆರೆ ತಾಲೂಕು ಆಸ್ಪತ್ರೆಗೆ ಸ್ಥಳಾಂತರ ಮಾಡಿ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ.