ಚಾಮರಾಜನಗರ :- ಬೆಳ್ಳಂ ಬೆಳಗ್ಗೆ ಶಾಲಾ ಕಾಲೇಜುಗಳಿಗೆ ತೆರಳಲು ಸಮರ್ಪಕ ಬಸ್ ಸೌಕರ್ಯವಿಲ್ಲ ಎಂದು ಆರೋಪಿಸಿ ಶಾಲಾ ಕಾಲೇಜು ವಿದ್ಯಾರ್ಥಿಗಳು ಕೆ.ಎಸ್. ಆರ್. ಟಿ ಸಿ ಬಸ್ ತಡೆದು ಪ್ರತಿಭಟನೆ ನಡೆಸಿದ ಘಟನೆ ಚಾಮರಾಜನಗರ ಜಿಲ್ಲೆಯ ಹನೂರಿನಲ್ಲಿ ಗುರುವಾರ ಬೆಳಗ್ಗೆ ನಡೆದಿದೆ.
ಚಾಮರಾಜನಗರ ಜಿಲ್ಲೆಯ ಹನೂರು ಪಟ್ಟಣದಲ್ಲಿ ಮಹದೇಶ್ವರ ಬೆಟ್ಟಕ್ಕೆ ತರಳುವ ಮಾರ್ಗದಲ್ಲಿ ಬಸ್ ತಡೆದು ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು, ಶಾಲಾ ಕಾಲೇಜುಗಳಿಗೆ ವಿದ್ಯಾರ್ಥಿಗಳು ತೆರಳಲು ಸಕಾಲದಲ್ಲಿ ಬಸ್ ಸೌಲಭ್ಯವಿಲ್ಲ ಎಂದು ಹಲವಾರು ಭಾರಿ ಅಧಿಕಾರಿಗಳಿಗೆ ದೂರು ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ಆರೋಪಿಸಿ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.
ಸ್ಥಳಕ್ಕೆ ಬಂದ ಹನೂರು ಪೊಲೀಸರೊಂದಿಗೂ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳು ವಾಗ್ವಾದಕ್ಕಿಳಿದರು. ಪ್ರತಿಭಟನೆಯಿಂದಾಗಿ ಹನೂರು ಮಹದೇಶ್ವರ ಬೆಟ್ಟದ ಮಾರ್ಗ ಕೆಲ ಘಂಟೆಗಳ ಕಾಲ ವಾಹನ ಸಂಚಾರವಿಲ್ಲದೆ ಪ್ರಯಾಣಿಕರು, ಭಕ್ತರು ಉರಿ ಬಿಸಿಲಿನಲ್ಲಿ ಬಸ್ ನಲ್ಲಿ ಕುಳಿತುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿತ್ತು.
ವರದಿ :ಸ್ವಾಮಿ ಬಳೇಪೇಟೆ