ತುರುವೇಕೆರೆ : ತಾಲೂಕಿನ ಕಲ್ಲೂರು ಕ್ರಾಸ್ ವೃತ್ತದಲ್ಲಿಂದು ನೂರಾರು ವಿದ್ಯಾರ್ಥಿಗಳು ಸಮಯಕ್ಕೆ ಸರಿಯಾಗಿ ಬಸ್ ಸೌಲಭ್ಯ ಒದಗಿಸಬೇಕೆಂದು ಆಗ್ರಹಿಸಿ ಬಸ್ಸುಗಳನ್ನು ತಡೆದು ಪ್ರತಿಭಟನೆ ನಡೆಸಿದರು.
ತಾಲೂಕಿನ ಕಲ್ಲೂರು ಕ್ರಾಸ್, ದೊಡ್ಡಗೊರಾಘಟ್ಟ, ಸಂಪಿಗೆ, ವಡವನಘಟ್ಟ, ವರಾಹಸಂದ್ರ, ಟಿ.ಬಿ.ಕ್ರಾಸ್ ಮಾರ್ಗದ ಹತ್ತಾರು ಹಳ್ಳಿಗಳ ವಿದ್ಯಾರ್ಥಿಗಳು ವ್ಯಾಸಂಗಕ್ಕಾಗಿ ನಾಗಮಂಗಲ, ತುರುವೇಕೆರೆ, ನಿಟ್ಟೂರು, ಗುಬ್ಬಿ, ತುಮಕೂರು ಸೇರಿದಂತೆ ವಿವಿಧ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿದ್ದು ಶಾಲಾ ಕಾಲೇಜಿಗೆ ಸರಿಯಾಗಿ ತೆರಳಲು ಅಗತ್ಯ ಬಸ್ ಸೌಲಭ್ಯ ಒದಗಿಸಬೇಕೆಂದು ಒತ್ತಾಯಿಸಿ ಕಲ್ಲೂರು ಕ್ರಾಸ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ಕಲ್ಲೂರು ಕ್ರಾಸ್ ವೃತ್ತವು ನಾಲ್ಕು ದಿಕ್ಕುಗಳ ಪಟ್ಟಣ, ನಗರಕ್ಕೆ ಕೇಂದ್ರವಾಗಿದ್ದು, ಇಲ್ಲಿಂದ ಸುಮಾರು 50 ಕ್ಕೂ ಅಧಿಕ ಹಳ್ಳಿಗಳ ವಿದ್ಯಾರ್ಥಿಗಳು ಇದೇ ಕಲ್ಲೂರು ಕ್ರಾಸ್ ಕೇಂದ್ರದಿAದ ಶಾಲಾ ಕಾಲೇಜಿಗೆ ಸಾರಿಗೆ ಸಂಸ್ಥೆಯ ಬಸ್ ಮೂಲಕ ತೆರಳುತ್ತಿದ್ದಾರೆ. ಆದರೆ ನಿಗದಿತ ವೇಳೆಗೆ ಬಸ್ ಬಾರದಿರುವ ಕಾರಣ ಶಾಲಾ ಕಾಲೇಜುಗಳಲ್ಲಿ ಪಾಠಪ್ರವಚನ ಪ್ರಾರಂಭವಾದ ನಂತರ ತೆರಳುವಂತಹ ಸ್ಥಿತಿ ನಿರ್ಮಾಣವಾಗಿದೆ. ಕಲ್ಲೂರು ಕ್ರಾಸ್ ವೃತ್ತದಿಂದ ನಿಟ್ಟೂರು, ಗುಬ್ಬಿ, ತುಮಕೂರು ಜಿಲ್ಲಾ ಕೇಂದ್ರಕ್ಕೆ ಪದವಿ ಪೂರ್ವ, ಪದವಿ, ತಾಂತ್ರಿಕ ಶಿಕ್ಷಣ, ವೈದ್ಯಕೀಯ ಶಿಕ್ಷಣ ಪಡೆಯಲು ಸಾಕಷ್ಟು ಮಂದಿ ವಿದ್ಯಾರ್ಥಿಗಳು ತೆರಳುತ್ತಿದ್ದು ಅವರಿಗೆ ಮೈಸೂರಿನಿಂದ ಬರುವ ವೇಗದೂತ ಬಸ್ ಅನ್ನೇ ಅವಲಂಬಿಸಬೇಕಿದೆ. ನಿಗದಿತ ಸಮಯಕ್ಕೆ ಬಸ್ ಸಹ ಬರುವುದಿಲ್ಲ. ಬರುವ ಕೆಲವು ಬಸ್ಸುಗಳು ಸಹ ಯಾವಾಗಲೂ ತುಂಬಿರುವುದರಿAದ ವಿದ್ಯಾರ್ಥಿಗಳು ಹತ್ತಲು ಸಹ ಸಾಧ್ಯವಾಗದ ಪರಿಸ್ಥಿತಿ ಉಂಟಾಗುತ್ತದೆ. ಇದರಿಂದ ಶಾಲಾಕಾಲೇಜಿಗೆ ಸಮಯಕ್ಕೆ ಸರಿಯಾಗಿ ತೆರಳಲು ಸಾಧ್ಯವಾಗುತ್ತಿಲ್ಲ ಎಂದು ವಿದ್ಯಾರ್ಥಿಗಳು ಅಳಲನ್ನು ತೋಡಿಕೊಂಡರು.
ಇನ್ನು ಪ್ರಾಥಮಿಕ, ಪ್ರೌಢಶಿಕ್ಷಣಕ್ಕೆ ಬಹುತೇಕ ಮಂದಿ ತುರುವೇಕೆರೆ ತಾಲೂಕು ಕೇಂದ್ರವನ್ನು ಅವಲಂಬಿಸಿದ್ದು, ಇಲ್ಲಿಯೂ ಸಹ ಬಸ್ ಸೌಕರ್ಯ ಸರಿಯಾಗಿಲ್ಲ. ಶಾಲಾ, ಕಾಲೇಜಿಗೆ ತಡವಾಗಿ ಹೋದರೆ ಶಿಕ್ಷಕರಿಂದ ಶಿಕ್ಷೆಗೆ ಗುರಿಯಾಗಬೇಕಲ್ಲದೆ ಮೊದಲ ಅವಧಿಯ ಪಾಠಗಳು ಮುಗಿದಿರುತ್ತದೆ. ಇದರಿಂದ ವಿದ್ಯಾರ್ಥಿಗಳಾದ ನಮಗೆ ಅನ್ಯಾಯವಾಗುತ್ತಿದೆ. ಇದಕ್ಕೆಲ್ಲಾ ಸಮರ್ಪಕ ಬಸ್ ವ್ಯವಸ್ಥೆ ಇಲ್ಲದಿರುವುದೇ ಕಾರಣವಾಗಿದೆ. ಪ್ರಾಥಮಿಕ, ಪ್ರೌಢಶಾಲೆ, ಪದವಿ ಪೂರ್ವ, ಪದವಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಶಾಲಾ ಹಂತದ ಸಿದ್ದತಾ ಪರೀಕ್ಷೆ, ಪೂರ್ವಸಿದ್ದತಾ ಪರೀಕ್ಷೆಗಳು, ವಾರ್ಷಿಕ ಪರೀಕ್ಷೆಗಳು ಜನವರಿಯಿಂದ ಪ್ರಾರಂಭವವಾಗಲಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಶಾಲಾ ಕಾಲೇಜುಗಳಲ್ಲಿ ಹೆಚ್ಚುವರಿ ಸಮಯದಲ್ಲಿ ಶಿಕ್ಷಕರು, ಉಪನ್ಯಾಸಕರುಗಳು ತರಗತಿ ನಡೆಸುತ್ತಿದ್ದಾರೆ.
ಶಾಲಾಕಾಲೇಜು ಎಂದಿನ ಸಮಯಕ್ಕೆ ಅರ್ಧಗಂಟೆ ಮುಂಚಿತವಾಗಿ ತೆರೆಯುತ್ತದೆ. ವಿಶೇಷ ತರಬೇತಿಯನ್ನು ಸಹ ನೀಡಲಾಗುತ್ತಿದೆ. ಎಸ್.ಎಸ್.ಎಲ್.ಸಿ. ಪರೀಕ್ಷೆಗೆ ಮೂರು ತಿಂಗಳ ಮೊದಲೇ ವಿಶೇಷ ಪಾಠಪ್ರವಚನ, ಕಿರುಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಜನವರಿಯಲ್ಲಿ ಪದವಿ ಪೂರ್ವ ವಿದ್ಯಾರ್ಥಿಗಳ ಪೂರ್ವಸಿದ್ದತಾ ಪರೀಕ್ಷೆ, ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ವಾರ್ಷಿಕ ಪರೀಕ್ಷೆಗಳು ಬರಲಿದ್ದು, ಇವುಗಳ ಅಧ್ಯಯನಕ್ಕೆ ತರಗತಿಯ ಅವಶ್ಯಕವಿದೆ. ಆದರೆ ಬಸ್ ಅವ್ಯವಸ್ಥೆಯಿಂದ ಶಾಲಾಕಾಲೇಜಿಗೆ ಸಮಯಕ್ಕೆ ಹೋಗಲಾಗದೆ ವಿದ್ಯಾರ್ಥಿಗಳು ಪಾಠಪ್ರವಚನದಿಂದ ವಂಚಿತರಾಗುವತಾಗಿದೆ ಎಂದು ಪ್ರತಿಭಟನಾ ವಿದ್ಯಾರ್ಥಿಗಳು ಸ್ಥಳಕ್ಕೆ ಆಗಮಿಸಿದ್ದ ಘಟಕ ವ್ಯವಸ್ಥಾಪಕ ತಮ್ಮಯ್ಯ ಅವರಲ್ಲಿ ತಮ್ಮ ನೋವನ್ನು ಹಂಚಿಕೊAಡರು.
ವಿದ್ಯಾರ್ಥಿಗಳ ಮನವಿಯನ್ನು ಆಲಿಸಿದ ಘಟಕ ವ್ಯವಸ್ಥಾಪಕ ತಮ್ಮಯ್ಯ, ವಿದ್ಯಾರ್ಥಿಗಳಿಗೆ ತೊಂದರೆಯಾಗದAತೆ ಶಾಲಾ ಕಾಲೇಜಿಗೆ ಸಮಯಕ್ಕೆ ಸರಿಯಾಗಿ ತೆರಳಲು ಸೂಕ್ತ ಬಸ್ ವ್ಯವಸ್ಥೆ ಕಲ್ಪಿಸುವುದಾಗಿ ಹಾಗೂ ಈ ಮಾರ್ಗವಾಗಿ ತೆರಳುವ ಇನ್ನಿತರ ಘಟಕಗಳ ಬಸ್ ಸಹ ಶಾಲಾ ಕಾಲೇಜಿಗೆ ವಿದ್ಯಾರ್ಥಿಗಳು ಸಮಯಕ್ಕೆ ಸರಿಯಾಗಿ ಹೋಗಲು ಅನುಕೂಲವಾಗುವಂತ ಸಮಯಕ್ಕೆ ಸಂಚರಿಸಲು ವ್ಯವಸ್ಥೆ ಮಾಡಬೇಕೆಂದು ತಿಳಿಸುವುದಾಗಿ ಹೇಳಿದರು.
ಘಟಕ ವ್ಯವಸ್ಥಾಪಕರ ಭರವಸೆ ಮೇರೆಗೆ ವಿದ್ಯಾರ್ಥಿಗಳು ಪ್ರತಿಭಟನೆ ಕೈಬಿಟ್ಟರು. ಮುಂದಿನ ದಿನಗಳಲ್ಲಿ ಮತ್ತೆ ಬಸ್ ಸೌಕರ್ಯ ಸರಿಯಾಗದಿದ್ದರೆ ಮತ್ತೆ ಪ್ರತಿಭಟನೆ ನಡೆಸುವುದು ಅನಿವಾರ್ಯ ಎಂಬುದನ್ನು ವಿದ್ಯಾರ್ಥಿಗಳು ತಿಳಿಸಿದರು. ಸಾರ್ವಜನಿಕರು, ಕೆಲ ವಿದ್ಯಾರ್ಥಿಗಳ ಪೋಷಕರೂ ಸಹ ಮಕ್ಕಳ ಪರವಾಗಿ ಪ್ರತಿಭಟನೆಗೆ ಸಹಕಾರ ನೀಡಿದ್ದರು. ತುರುವೇಕೆರೆ ಪೊಲೀಸರು ಯಾವುದೇ ಅಹಿತಕರ ಘಟನೆ ನಡೆಯದಂತೆ ಕ್ರಮವಹಿಸಿ, ವಿದ್ಯಾರ್ಥಿಗಳ ಮನವೊಲಿಸುವಲ್ಲಿ ಯಶಸ್ವಿಯಾದರು.
ವರದಿ : ಗಿರೀಶ್ ಕೆ ಭಟ್




