ಬ್ರಾಹ್ಮಣ ಮಹಾಸಮ್ಮೇಳನ ಯಶಸ್ಸಿಗೆ ಶ್ರಮಿಸಿ: ಸುಭಾಷಿಣಿ ರವೀಶ್ ಮನವಿ

Bharath Vaibhav
ಬ್ರಾಹ್ಮಣ ಮಹಾಸಮ್ಮೇಳನ ಯಶಸ್ಸಿಗೆ ಶ್ರಮಿಸಿ: ಸುಭಾಷಿಣಿ ರವೀಶ್ ಮನವಿ
WhatsApp Group Join Now
Telegram Group Join Now

ತುರುವೇಕೆರೆ: ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ 50 ನೇ ವರ್ಷದ ಸುವರ್ಣ ಸಂಭ್ರಮದ ಸಂದರ್ಭದಲ್ಲಿ ಜನವರಿ 18 ಮತ್ತು 19 ರಂದು 11 ನೇ ಬ್ರಾಹ್ಮಣ ಮಹಾ ಸಮ್ಮೇಳನವನ್ನು ಬೆಂಗಳೂರಿನ ಅರಮನೆ ಮೈದಾನದ ತ್ರಿಪುರವಾಸಿನಿ ಸಭಾಂಗಣದಲ್ಲಿ ಆಯೋಜಿಸಿದ್ದು, ಸಮ್ಮೇಳನದ ಯಶಸ್ಸಿಗೆ ಎಲ್ಲಾ ವಿಪ್ರ ಬಾಂದವರು ಶ್ರಮಿಸಬೇಕೆಂದು ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯೆ, ತುಮಕೂರು ಜಿಲ್ಲಾ ವಿಪ್ರ ಮಹಿಳಾ ಘಟಕದ ಅಧ್ಯಕ್ಷೆ ಸುಭಾಷಿಣಿ ರವೀಶ್ ಮನವಿ ಮಾಡಿದರು.

ಪಟ್ಟಣದ ಗಾಯತ್ರಿ ಸಮುದಾಯ ಭವನದಲ್ಲಿ ಸಮ್ಮೇಳನದ ಆಹ್ವಾನ ಪತ್ರಿಕೆ ಹಾಗೂ ಬ್ಯಾನರ್ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಸಮಾಜದಲ್ಲಿ ಧರ್ಮ, ಸಂಸ್ಕೃತಿ, ಸಂಪ್ರದಾಯ, ಆಚಾರ ವಿಚಾರಗಳಿಗೆ ಸಂಬಂಧಿಸಿದಂತೆ ಮೇಲ್ಪಂಕ್ತಿ ಹಾಕಿಕೊಟ್ಟಿರುವ ಬ್ರಾಹ್ಮಣ ಸಮುದಾಯವನ್ನು ರಾಜ್ಯಾದ್ಯಂತ ಸಂಘಟನಾತ್ಮಕವಾಗಿ ಬಲಿಷ್ಠಗೊಳಿಸಬೇಕೆನ್ನುವ ಉದ್ದೇಶದಿಂದ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾವು ಮಹಾಸಮ್ಮೇಳನವನ್ನು ಆಯೋಜಿಸಿದೆ. ವಿಪ್ರರು ಹಿಂದಿನಿಂದಲೂ ಎಲ್ಲಾ ಸಮುದಾಯದವರೊಂದಿಗೆ ಉತ್ತಮ ಬಾಂದವ್ಯವನ್ನು ಹೊಂದಿ ಸರ್ವೇಜನ ಸುಖೀನೋಭವಂತು ಎಂಬ ಉದಾರ ಮನೋಭಾವದಿಂದ ಸಮಾಜದಲ್ಲಿ ಬದುಕುತ್ತಾ ಬಂದಿದ್ದಾರೆ. ಆದರೂ ಸಹ ಕೆಲವು ಸಂದರ್ಭಗಳಲ್ಲಿ ಬ್ರಾಹ್ಮಣ ಸಮುದಾಯವನ್ನು ಕೀಳಾಗಿ ಕಾಣುವ, ತೇಜೋವಧೆ ಮಾಡುವಂತಹ ಪ್ರಕರಣಗಳು ನಡೆದಿರುವುದು ನಮ್ಮ ಮುಂದಿದೆ. ಆದ್ದರಿಂದ ಇಂತಹ ಪ್ರಕರಣಗಳು ಮರುಕಳಿಸದಂತೆ ಎಚ್ಚರವಹಿಸಿ, ಸಮುದಾಯ ಸಂಘಟನಾತ್ಮಕವಾಗಿ ಸದೃಢವಾಗಬೇಕು, ಸಮುದಾಯದ ರಕ್ಷಣೆಗೆ ಹೆಚ್ಚಿನ ಒತ್ತನ್ನು ನೀಡಬೇಕು, ಸಮುದಾಯದ ಯುವ ಪೀಳಿಗೆ ಬ್ರಾಹ್ಮಣ ಸಂಸ್ಕೃತಿ, ಸಂಪ್ರದಾಯ, ಆಚರಣೆಯಲ್ಲಿ ಹಾಗೂ ಸಂಘಟನೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕೆಂಬ ಆಶಯ ಸಮ್ಮೇಳನದ್ದಾಗಿದೆ ಎಂದರು.

ಜನವರಿ 18 ಹಾಗೂ 19 ರಂದು ನಡೆಯುವ ಬ್ರಾಹ್ಮಣ ಮಹಾ ಸಮ್ಮೇಳನವನ್ನು ಶೃಂಗೇರಿಯ ಜಗದ್ಗುರುಗಳಾದ ಶ್ರೀ ವಿಧುಶೇಖರಭಾರತೀ ಸನ್ನಿದಾನಂಗಳವರು ದಿವ್ಯ ಸಾನಿದ್ಯ ವಹಿಸಿ ಉದ್ಘಾಟಿಸಲಿದ್ದು,. ಸಮ್ಮೇಳನದಲ್ಲಿ ವಿವಿಧ ಮಠಾಧೀಶರುಗಳು, ವಿದ್ವಾಂಸರು ಆಗಮಿಸಲಿದ್ದು, ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ವಿಪ್ರಸಾಧಕರನ್ನು ಸನ್ಮಾನಿಸಲಾಗುವುದು. ಇದೇ ಸಂದರ್ಭದಲ್ಲಿ ಸಂಸ್ಮರಣ ಸಂಚಿಕೆಯನ್ನು ಲೋಕಾರ್ಪಣೆಯಾಗಲಿದೆ. ಸಮ್ಮೇಳನದ ಎರಡನೇ ವೇದಿಕೆಯಲ್ಲಿ ವ್ಯಾಪಾರ, ವಾಣಿಜ್ಯ ಸಮಾವೇಶ ಮತ್ತು ವಧುವರರ ಸಮಾಗಮ ಹಾಗೂ ಜಿಲ್ಲಾ ಮಟ್ಟದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ ಎಂದರು.

ತುಮಕೂರು ಜಿಲ್ಲಾ ಬ್ರಾಹ್ಮಣ ಸಮಾಜದ ಸಂಚಾಲಕ ಹೆಚ್.ಎಸ್.ರಾಘವೇಂದ್ರ, ಮಹಿಳಾ ಸಮಾಜದ ಜಿಲ್ಲಾ ಸಂಚಾಲಕಿ ಛಾಯಾರಾಮಶೇಷ, ಹೊಯ್ಸಳ ಕರ್ನಾಟಕ ಸಂಘದ ಜಿಲ್ಲಾ ನಿರ್ದೇಶಕ ರಾಮಶೇಷು, ತಾಲೂಕು ಬ್ರಾಹ್ಮಣ ಸಭಾ ಅಧ್ಯಕ್ಷ ಸತ್ಯನಾರಾಯಣ್, ವಿಪ್ರ ಮಹಿಳಾ ಸಮಾಜದ ತಾಲೂಕು ಅಧ್ಯಕ್ಷೆ ಉಮಾಮಂಜುನಾಥ್, ಬ್ರಾಹ್ಮಣ ಸಭಾದ ಉಷಾಶ್ರೀನಿವಾಸ್, ಲಕ್ಷ್ಮೀಹಿರಣ್ಣಯ್ಯ, ಕುಸುಮ ಸತ್ಯನಾರಾಯಣ್, ಲತಾಶ್ರೀಧರ್ ಪಂಡಿತ್, ಟಿ.ವಿ.ರಂಗನಾಥ್, ಪ್ರಾಣೇಶ್, ಶ್ರೀನಿವಾಸ್, ಗಿರೀಶ್ ಕೆ ಭಟ್, ರಾಮಚಂದ್ರ, ಟಿ.ಆರ್.ಶ್ರೀನಿವಾಸ್, ಕೆ.ಸತ್ಯನಾರಾಯಣ್, ನಂಜುಂಡಸ್ವಾಮಿ, ಸತೀಶ್, ಗುರುಪ್ರಸಾದ್, ರಾಘವೇಂದ್ರ ಸೇರಿದಂತೆ ವಿಪ್ರ ಬಾಂದವರು ಉಪಸ್ಥಿತರಿದ್ದರು.

ವರದಿ: ಗಿರೀಶ್ ಕೆ ಭಟ್

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!