ಸಿರುಗುಪ್ಪ: ನಾವೇನು ಬ್ರೋಕರ್‌ಗಳಾ, ರೌಡಿಗಳಾ, ಮದ್ಯವರ್ತಿಗಳಾ ಎಂದು ಪ್ರಶ್ನಿಸಿದ ವಕೀಲರ ಸಂಘದ ಕಾರ್ಯದರ್ಶಿ ಎಮ್.ಶಿವಕುಮಾರಸ್ವಾಮಿ, ಮಾಜಿ ಅಧ್ಯಕ್ಷ ಎಸ್.ಮಂಜುನಾಥ, ಕಾರ್ಯಕಾರಿ ಸಮಿತಿ ಸದಸ್ಯರಾದ ಜಗಧೀಶಸ್ವಾಮಿ, ಹಳೆಕೋಟೆ ರಾಮಪ್ಪ, ಜಿಲಾನಿ ಇನ್ನಿತರ ವಕೀಲರು ನಿಮ್ಮ ಕಛೇರಿಯಲ್ಲಿದ್ದಾರೆ ಬ್ರೋಕರ್‌ಗಳು. ಬಂದ ತಕ್ಷಣ ಸರ್ ಏನು ತಂದೀರಿ, ಚೆಕ್ಕಾ?, ಕ್ಯಾಷಾ? ಎಂದು ಕಿವಿಯಲ್ಲಿ ಕೇಳುವ ಹಲವು ಬ್ರೋಕರ್‌ಗಳಿದ್ದಾರೆಂದು ತಹಶೀಲ್ದಾರರ ವಿರುದ್ದ ದೂರಿದರು.

ನಗರದ ತಾಲೂಕು ಕಛೇರಿಯಲ್ಲಿ ನವೆಂಬರ್.25. ಮಂಗಳವಾರದಂದು ತಹಶೀಲ್ದಾರರ ವಿರುದ್ದ ವಕೀಲರಿಂದ ದಿಢೀರ್ ಪ್ರತಿಭಟನೆ ನಡೆಯಿತು. ವಕೀಲರನ್ನು ದಲ್ಲಾಳಿಗಳೆಂದು ಕರೆದಿದ್ದಾರೆಂದು ವಕೀಲರ ತಂಡದವರು ಕಛೇರಿಗೆ ಬಂದು ಮಾತುಕತೆಗೆ ಮನವಿ ಮಾಡಲು ಮುಂದಾದರು. ಅವರನ್ನು ಮಾತನಾಡಿಸದೇ ತಹಶೀಲ್ದಾರರು ತಮ್ಮ ವಾಹನವನ್ನು ಹತ್ತಿದರು.
ಇದರಿಂದ ಕುಪಿತಗೊಂಡ ವಕೀಲರು ತಹಶೀಲ್ದಾರರ ವಾಹನದ ಮುಂದೆ ಕುಳಿತು ನಮಗೆ ಸೂಕ್ತ ಉತ್ತರ ನೀಡದೇ ಹೋಗುವಂತಿಲ್ಲ. ನಮ್ಮನ್ನು ಬ್ರೋಕರ್ ಎಂದು ಕರೆಯುವಿರಾ?. ರೈತರು ಸಮಸ್ಯೆಗಳನ್ನು ನಿಮ್ಮ ಮುಂದೆ ವಾದ ಮಾಡುವುದು ನಮ್ಮ ಹಕ್ಕು ನಮಗೆ ನ್ಯಾಯ ಒದಗಿಸಬೇಕೆಂದು ಪ್ರತಿಭಟಿಸಿದರು. ಸ್ಥಳಕ್ಕೆ ಸಿಪಿಐ ಹನುಮಂತಪ್ಪ, ಪಿಎಸ್‌ಐ ಪರಶುರಾಮ ದೌಡಾಯಿಸಿದರು.
ಕಾಲಂ ನಂ.11ನಲ್ಲಿ 7ಎಫ್ ತೆಗೆಯಲು ಇನ್ನು ಅದ್ಯಯನ ಮಾಡಿಲ್ಲ. ಪ್ರಕರಣ ನಿರ್ವಾಹಕರಿಲ್ಲ. ಎಂದು ಕಳೆದ ಆರು ತಿಂಗಳ ಕಾಲ ಸತಾಯಿಸುತ್ತಿರುವ ಬಗ್ಗೆ ರೈತರ ಸಮಸ್ಯೆಗಳ ಬಗೆಗಿನ ನಮ್ಮ ವಾದವನ್ನು ನೀವು ಪರಿಗಣಿಸಬೇಕೆಂದು ಮನವಿ ಮಾಡಿದಾಗ ತಹಶೀಲ್ದಾರರು ತಮ್ಮ ನ್ಯಾಯಾಲಯದಲ್ಲಿ ಸಾರ್ವಜನಿಕರ ಮುಂದೆ ಬ್ರೋಕರ್‌ಗಳಾ ಎಂದು ಅವಮಾನಿಸಿದ್ದಾರೆಂದು ವಕೀಲರಾದ ಚಂದಿ ಮಹಬಾಷ ಅವರು ಆರೋಪಿಸಿದರು.
ಪ್ರಕರಣವೊಂದರಲ್ಲಿ ಸಹೋದರರು ರಾಜಿಗೆ ಮುಂದಾಗಿದ್ದಾರೆ. ಸ್ವಲ್ಪ ಸಮಯ ಅವಕಾಶ ನೀಡಬೇಕೆಂದು ಮನವಿ ಮಾಡಿದೆವು. ಅದನ್ನು ಅವರು ಪುರಸ್ಕರಿಸುವುದು ಅಥವಾ ತಿರಸ್ಕರಿಸಬಹುದಿತ್ತು. ಅದು ಬಿಟ್ಟು ನೀವು ಹೇಳಿದ್ದೇ ನಡೆಯಬೇಕಾ ನಾನು ಪೋಲೀಸ್ ಕರೆಸುವೆ ಎಂದು ಗದರುತ್ತಾ ನಮ್ಮನ್ನು ಬ್ರೋಕರ್‌ಗಳೆಂದು ಕರೆಯುವುದು ಎಷ್ಟು ಸರಿ ಎಂದು ತಾಲೂಕು ವಕೀಲರ ಸಂಘದ ಉಪಾಧ್ಯಕ್ಷ ಎಮ್.ಷರೀಪ್‌ಸಾಬ್ ಆಕ್ಷೇಪಿಸಿದರು.
ಈ ಕಛೇರಿಯಲ್ಲಿ ಏನೆಲ್ಲಾ ನಡೆಯುತ್ತಿದೆ ಎಂಬುದು ನಮಗೂ ಗೊತ್ತಿದೆ. ಮಾತ್ತೆತ್ತಿದರೆ ಪೋಲೀಸರನ್ನು ಕರೆಸುವುದಾಗಿ ಹೆದರಿಸುವಿರಾ. ಅವರನ್ನಿಟ್ಟುಕೊಂಡು ಧಮಕಿ ಹಾಕುವಿರಾ ನಮಗೂ ಕಾನೂನು ಗೊತ್ತಿದೆಂದು ವಕೀಲರ ಸಂಘದ ಸದಸ್ಯರಾದ ಖಾದರಭಾಷ, ಆರ್.ಪ್ರಕಾಶ, ಸಿಕ್‌ಮದ್, ವಿನಯ್‌ಕುಮಾರ್, ಕೆ.ರಾಜಾಸಾಬ್, ಉಪ್ಪಾರ ಸಣ್ಣ ಯಂಕೋಬ, ವೀರೇಶ, ಜಿ.ಮಾರೆಣ್ಣ ಅವರು ವಾಗ್ವಾದ ನಡೆಸಿದರು.
ತಹಶೀಲ್ದಾರ್ ಕೋರ್ಟ್ನಲ್ಲಿ ಸಾರ್ವಜನಿಕರ ಮುಂದೆ ವಕೀಲರನ್ನು ಬ್ರೋಕರ್ ಕೆಲಸಕ್ಕೆ ಬಂದಿರುವಿರಾ ಎಂದು ಗೇಲಿ ಮಾಡಿದ್ದು, ಅವಮಾನವಾಗಿದೆ. ಕಾರಣ ವಕೀಲರಿಗೆ ಕ್ಷಮೆ ಕೇಳಬೇಕೆಂದು ಒತ್ತಾಯಿಸಿದರು. ಇನ್ನು ಮುಂದೆ ಈ ರೀತಿಯ ಘಟನೆ ಮರುಕಳಿಸಬಾರದೆಂದು ಎಚ್ಚರಿಸಿದರು.
ಕೊನೆಗೆ ಪೋಲೀಸರ ಸಮ್ಮುಖದಲ್ಲಿ ನಮಗೂ ನೀವು ಸನ್ನಡತೆಯಿಂದ ನಡೆದುಕೊಳ್ಳಬೇಕು.
ಯಾರಿಗಾದರೂ ನನ್ನಿಂದ ತೊಂದರೆಯಾಗಿದ್ದಲ್ಲಿ ವಿಷಾದ ವ್ಯಕ್ತಪಡಿಸುವುದಾಗಿ, ಎಲ್ಲರೂ ಸಾರ್ವಜನಿಕರ ಕಾರ್ಯವನ್ನು ಮಾಡೋಣವೆಂದು ತಹಶೀಲ್ದಾರ್ ಗೌಸಿಯಾ ಬೇಗಂ ಅವರು ತಿಳಿಸಿದರು.
ವರದಿ: ಶ್ರೀನಿವಾಸ ನಾಯ್ಕ




