ಮಂಡ್ಯ : ಗೃಹಲಕ್ಷ್ಮಿ ಯೋಜನೆಯಡಿ ರೂ.2 ಸಾವಿರ ಕೊಡುವ ವಾಗ್ದಾನ ಮಾಡಿ ರೂ.20 ಸಾವಿರ ನಿಮ್ಮ ಜೇಬಿನಿಂದ ಕಿತ್ತುಕೊಳ್ಳುವ ಪ್ರವೃತ್ತಿ ಕಾಂಗ್ರೆಸ್ ಸರ್ಕಾರದ್ದು ಎಂದು ಮಾಜಿ ಸಂಸದೆ ಸುಮಲತಾ ಅಂಬರೀಷ್ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಸರ್ಕಾರ ಹಾಲಿನ, ವಿದ್ಯುತ್ ದರ ಇತ್ಯಾದಿ ಅಗತ್ಯ ವಸ್ತುಗಳ ಮೇಲಿನ ಬೆಲೆ ಏರಿಕೆ ನೀತಿ ವಿರೋಧಿಸಿ ಬಿಜೆಪಿಯಿಂದ ಎರಡನೇ ದಿನಕ್ಕೆ ಕಾಲಿಟ್ಟ ಜನಾಕ್ರೋಶ ಯಾತ್ರೆಯ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ಸರ್ಕಾರವು ಜನರಿಂದ ಹಣವನ್ನು ಕಿತ್ತುಕೊಳ್ಳುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು ಎಂದರು.
ಉಚಿತ ಉಚಿತ ಉಚಿತ ಎಂಬ ಮಾತುಗಳನ್ನು ನಾವು ಎರಡು ವರ್ಷ ಕೇಳಿಸಿಕೊಂಡೆವು. ಈಗ ಗೃಹಲಕ್ಷ್ಮಿ ಸೇರಿ ಅನೇಕ ಭಾಗ್ಯಗಳನ್ನು ಮರೆತೇ ಬಿಡುವ ಸ್ಥಿತಿಗೆ ನಾವು ಬಂದಿದ್ದೇವೆ. ಇದೆಂಥ ದೌರ್ಭಾಗ್ಯ ಎಂಬ ದುಸ್ಥಿತಿ ಬಂದಿದೆ ಎಂದು ಟೀಕಿಸಿದರು.
ಉಚಿತದ ವಾಗ್ದಾನ ನಿಭಾಯಿಸಲು ಆಗದೆ ಪ್ರತಿಯೊಂದು ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುತ್ತಿದ್ದಾರೆ. ಬಡವರು, ಮಧ್ಯಮ ವರ್ಗದವರು ಮಾತ್ರವಲ್ಲದೇ ಅದಕ್ಕಿಂತ ಮೇಲ್ವರ್ಗದವರೂ ಹೇಗೆ ಜೀವನ ಮಾಡುವುದೆಂಬ ಸಂದಿಗ್ಧ ಪರಿಸ್ಥಿತಿಯಲ್ಲಿದ್ದಾರೆ. ಪೆಟ್ರೋಲ್, ಡೀಸೆಲ್, ಚಿನ್ನವು ಅಂತರರಾಷ್ಟ್ರೀಯ ಮಾರುಕಟ್ಟೆ ಮೇಲೆ ಅವಲಂಬಿತವಾಗಿದೆ. ಸ್ಟಾಕ್ ಮಾರ್ಕೆಟ್ ಕುಸಿದರೆ ಅದು ಪ್ರಪಂಚದ ವಿದ್ಯಮಾನ ಎಂದು ಅಭಿಪ್ರಾಯಪಟ್ಟರು.