ಈರುಳ್ಳಿಯನ್ನು ಸಾಮಾನ್ಯವಾಗಿ ಎಲ್ಲರೂ ಕೂಡ ಇಷ್ಟಪಟ್ಟು ತಿನ್ನುತ್ತಾರೆ. ಇದು ಅಡುಗೆಯ ರುಚಿ ಹೆಚ್ಚಿಸುವುದು ಮಾತ್ರವಲ್ಲ ಆರೋಗ್ಯಕ್ಕೂ ಬಹಳ ಒಳ್ಳೆಯದು. ಈ ತರಕಾರಿಯಲ್ಲಿರುವ ನೈಸರ್ಗಿಕ ಔಷಧಿ ಗುಣಗಳು ದೇಹಕ್ಕೆ ಒಳ್ಳೆಯದು. ಇದನ್ನು ಬೇಯಿಸಿ ತಿನ್ನುವುದಕ್ಕಿಂತ ಹಸಿಯಾಗಿ ಸೇವನೆ ಮಾಡುವುದು ಒಳ್ಳೆಯದು. ಅದರಲ್ಲಿಯೂ ಬೇಸಿಗೆ ಕಾಲದಲ್ಲಿ ಇದರ ಸೇವನೆ ಅನೇಕ ರೀತಿಯ ಆರೋಗ್ಯ ಸಮಸ್ಯೆಗಳಿಂದ ಮುಕ್ತಿ ನೀಡುತ್ತದೆ ಎಂದು ತಜ್ಞರು ಹೇಳುತ್ತಾರೆ. ಹಾಗಾದರೆ ಇದರಿಂದ ಸಿಗುವ ಪ್ರಯೋಜನಗಳೇನು ತಿಳಿದುಕೊಳ್ಳಿ.
ಈರುಳ್ಳಿಯನ್ನು ಸೇವನೆ ಮಾಡದವರೇ ಇಲ್ಲ. ಇದಿಲ್ಲದೆ ಅಡುಗೆ ಮಾಡುವುದು ಬಹಳ ಕಷ್ಟವೇ ಸೈ. ಇವು ಆಹಾರಕ್ಕೆ ರುಚಿ ನೀಡುವುದು ಮಾತ್ರವಲ್ಲ ಬದಲಾಗಿ ಈ ತರಕಾರಿಯಲ್ಲಿರುವ ನೈಸರ್ಗಿಕ ಔಷಧಿ ಗುಣಗಳು ಆರೋಗ್ಯಕ್ಕೂ ಬಹಳ ಒಳ್ಳೆಯದು. ಇದು ಒಂದು ರೀತಿಯ ಪೋಷಕಾಂಶಗಳ ಶಕ್ತಿ ಕೇಂದ್ರ ಎಂದರೆ ತಪ್ಪಾಗಲಾರದು. ಹಾಗಾಗಿ ಇವುಗಳನ್ನು ಅನೇಕ ರೀತಿಯ ಔಷಧಿಗಳಲ್ಲಿ ಬಳಕೆ ಮಾಡಲಾಗುತ್ತದೆ. ಈರುಳ್ಳಿ (Onions) ಬ್ಯಾಕ್ಟೀರಿಯಾ ವಿರೋಧಿ ಮತ್ತು ಉರಿಯೂತದ ಗುಣಲಕ್ಷಣಗಳಿಂದ ಸಮೃದ್ಧವಾಗಿದ್ದು ಆರೋಗ್ಯಕ್ಕೆ ಉತ್ತಮವಾದ ಅನೇಕ ಪೋಷಕಾಂಶಗಳನ್ನು ಹೊಂದಿದೆ. ಅದರಲ್ಲಿಯೂ ಬೇಸಿಗೆ (Summer) ಕಾಲದಲ್ಲಿ ಈರುಳ್ಳಿ ಸೇವನೆ ಮಾಡುವ ಮೂಲಕ ಅನೇಕ ರೀತಿಯ ಆರೋಗ್ಯ ಸಮಸ್ಯೆಗಳಿಂದ ರಕ್ಷಿಸಿಕೊಳ್ಳಬಹುದು. ಇವುಗಳನ್ನು ಬೇಯಿಸದೆಯೇ ಹಸಿಯಾಗಿ ಸೇವನೆ ಮಾಡುವುದರಿಂದ ಸಾಕಷ್ಟು ಲಾಭಗಳಿವೆ. ಹಾಗಾದರೆ ಇದನ್ನು ಸೇವನೆ ಮಾಡುವುದರಿಂದ ಸಿಗುವ ಪ್ರಯೋಜನಗಳ ಬಗ್ಗೆ ವಿವರವಾಗಿ ತಿಳಿದುಕೊಳ್ಳಿ.
ಈರುಳ್ಳಿಯಲ್ಲಿ ಸಲ್ಫರ್, ಫೈಬರ್, ಪೊಟ್ಯಾಸಿಯಮ್, ಕ್ಯಾಲ್ಸಿಯಂ, ವಿಟಮಿನ್ ಬಿ ಮತ್ತು ಸಿ ನಂತಹ ಪೋಷಕಾಂಶಗಳಿವೆ. ಇದು ಎಲ್ಲರಿಗೂ ತಿಳಿದಿರುವ ವಿಚಾರ. ಹಾಗಾಗಿಯೇ ಈರುಳ್ಳಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎನ್ನಲಾಗುತ್ತದೆ. ಅದರಲ್ಲಿಯೂ ಆಯುರ್ವೇದ ತಜ್ಞರು ಹೇಳುವ ಪ್ರಕಾರ, ಬೇಸಿಗೆ ಕಾಲದಲ್ಲಿ ಸಾಮಾನ್ಯವಾಗಿ ತಾಪಮಾನ ಹೆಚ್ಚಾಗಿರುವುದರಿಂದ ಆ ಶಾಖದಿಂದ ತಪ್ಪಿಸಿಕೊಳ್ಳಲು ಜನ ಹೆಣಗಾಡುತ್ತಿರುತ್ತಾರೆ. ಈ ದಿನಗಳಲ್ಲಿ ರೋಗಗಳ ಅಪಾಯವೂ ಕೂಡ ಅಧಿಕವಾಗಿರುತ್ತದೆ. ಹಾಗಾಗಿ ಇಂತಹ ಸಮಸ್ಯೆಗಳಿಂದ ದೂರವಿರಲು ದೇಹಕ್ಕೆ ಹೆಚ್ಚಿನ ಪೌಷ್ಠಿಕಾಂಶದ ಅಗತ್ಯವಿರುತ್ತದೆ.
ಇಂತಹ ಸಂದರ್ಭಗಳಲ್ಲಿ ಪ್ರತಿನಿತ್ಯ ಹಸಿ ಈರುಳ್ಳಿ ಸೇವನೆ ಮಾಡುವುದು ಅನೇಕ ರೀತಿಯ ಸಮಸ್ಯೆಗಳಿಂದ ಮುಕ್ತಿ ಪಡೆಯುವುದಕ್ಕೆ ಸಹಾಯ ಮಾಡುತ್ತದೆ. ಜೊತೆಗೆ ಈರುಳ್ಳಿ ಸೇವನೆಯು ದೇಹಕ್ಕೆ ತಂಪನ್ನು ನೀಡುವುದರಿಂದ ದೇಹವನ್ನು ಒಳಗಿನಿಂದ ತಂಪಾಗಿಡುವುದರ ಜೊತೆಗೆ ದೇಹದ ತಾಪಮಾನವನ್ನು ಸಮತೋಲನದಲ್ಲಿಡುತ್ತದೆ ಜೊತೆಗೆ ಬೆವರು ಕೂಡ ಕಡಿಮೆಯಾಗುತ್ತದೆ.
ಬೇಸಿಗೆಯಲ್ಲಿ ಈರುಳ್ಳಿ ತಿನ್ನುವುದರ ಪ್ರಯೋಜನಗಳ ಬಗ್ಗೆ ಮಾಹಿತಿ ಇಲ್ಲಿದೆ; ಈರುಳ್ಳಿ ಸೇವನೆಯು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಬೇಸಿಗೆಯಲ್ಲಿ ಈರುಳ್ಳಿ ತಿನ್ನುವುದರಿಂದ ಹೀಟ್ ಸ್ಟ್ರೋಕ್ ತಡೆಯಬಹುದು. ಜೊತೆಗೆ ಬಿಸಿ ಗಾಳಿ ಅಪಾಯ ಹೆಚ್ಚಾಗಿದ್ದಾಗ ಕಚ್ಚಾ ಈರುಳ್ಳಿ ದೇಹದ ತಾಪಮಾನವನ್ನು ಸಮತೋಲನಗೊಳಿಸುವ ಮೂಲಕ ಶಾಖದ ಆಘಾತದಿಂದ ನಿಮ್ಮನ್ನು ರಕ್ಷಿಸುತ್ತದೆ. ಈರುಳ್ಳಿ ತಂಪು ಸ್ವಭಾವದ್ದಾಗಿರುವುದರಿಂದ ಬೇಸಿಗೆಯಲ್ಲಿ ಇದರ ಸೇವನೆ ಮಾಡುವುದರಿಂದ ನೈಸರ್ಗಿಕವಾಗಿ ದೇಹವನ್ನು ತಂಪು ಮಾಡುತ್ತದೆ.
ಈರುಳ್ಳಿಯಲ್ಲಿ ಫೈಬರ್ ಅಧಿಕವಾಗಿದ್ದು, ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುತ್ತದೆ. ಇನ್ನು ಬೇಸಿಗೆಯಲ್ಲಿ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ಹೆಚ್ಚಾಗಿರುವುದರಿಂದ ಇಂತಹ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ.
ಈರುಳ್ಳಿಯಲ್ಲಿ ಉತ್ಕರ್ಷಣ ನಿರೋಧಕಗಳು ಮತ್ತು ವಿಟಮಿನ್ ಸಿ ಸಮೃದ್ಧವಾಗಿರುವುದರಿಂದ ಅವು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ. ಬೇಸಿಗೆಯಲ್ಲಿ ಉಂಟಾಗುವ ರೋಗಗಳನ್ನು ತಡೆಗಟ್ಟಲು ಈರುಳ್ಳಿ ಸಹಾಯ ಮಾಡುತ್ತದೆ ಎಂದು ತಜ್ಞರು ಹೇಳುತ್ತಾರೆ.