ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನ ಐತಿಹಾಸಿಕ ದೇವಸ್ಥಾನ ಗವಿ ಗಂಗಾಧರೇಶ್ವರ ದೇಗುಲದಲ್ಲಿ ಮಕರ ಸಂಕ್ರಮಣದ ಶುಭ ಸಂದರ್ಭದಲ್ಲಿ ವಿಸ್ಮಯವೊಂದು ನಡೆದಿದೆ. ಸೂರ್ಯ ತನ್ನ ಪಥ ಬದಲಿಸುವ ವೇಳೆ ಗವಿಗಂಗಾಧರೇಶ್ವರ ಸ್ವಾಮಿಗೆ ನಮಸ್ಕರಿಸುವ ಮೂಲಕ ಕೌತುಕ ಸಂದರ್ಭಕ್ಕೆ ಸಾಕ್ಷಿಸಿಯಾಗಿದ್ದಾನೆ.
ಬೆಂಗಳೂರಿನ ಗವಿಪುರಂನ ಗುಟ್ಟಹಳ್ಳಿಯಲ್ಲಿರುವ ಗವಿ ಗಂಗಾಧರೇಶ್ವರ ದೇವಾಲಯದಲ್ಲಿ ಸೂರ್ಯನು ದಕ್ಷಿಣಾಯಣದಿಂದ ಉತ್ತರಾಯಣಕ್ಕೆ ತನ್ನ ಪಥ ಬದಲಿಸುವ ಸಂಕ್ರಾಂತಿಯ ದಿನದಂದು ಸಂಜೆ ಸೂರ್ಯದೇವ ದೇವಾಲಯದ ಗರ್ಭಗುಡಿಯ ಮೂಲಕ ತನ್ನ ರಶ್ಮಿಯನ್ನು ಗಂಗಾಧರನಿಗೆ ಸ್ಪರ್ಶಿಸುವ ಮೂಲಕ ಸೂರ್ಯರಶ್ಮಿಯ ಅಭಿಷೇಕ ಮಾಡಿದ್ದಾನೆ.
ಸೂರ್ಯದೇವನ ರಶ್ಮಿಯು ದೇಗುಲದ ಒಳಗಿರುವ ಶಿವಲಿಂಗವನ್ನು ಸಂಜೆ 5 ಗಂಟೆ 18 ನಿಮಿಷಕ್ಕೆ ಸ್ಪರ್ಶಿಸಿದೆ. ಗರ್ಭಗುಡಿಯ ಮುಂಭಾಗದಲ್ಲಿರುವ ನಂದಿಯ ವಿಗ್ರಹದ ಎರಡು ಕೊಂಬುಗಳ ಮೂಲಕವಾಗಿ ಸೂರುಅನ ಕಿರಣಗಳು ಮುಖ್ಯದ್ವಾರವನ್ನು ದಾಟಿ ಶಿವಲಿಂಗವನ್ನು ಸ್ಪರ್ಶಿಸಿವೆ.
ಈ ಮೂಲಕ ಸೂರ್ಯದೇವರು ಶಿವ ದೇವರಿಗೆ ನಮಸ್ಕರಿಸಿ ಅಭಿಷೇಕ ಮಾಡಿ ಮುಂದೆ ಚಲಿಸಿದ್ದಾನೆ ಎಂದು ವ್ಯಾಖ್ಯಾನಿಸಲಾಗುತ್ತಿದೆ. ಈ ವಿಸ್ಮಯಕಾರಿ ಬೆಳಕಿನ ಕೌತುಕವನ್ನು ನೂನಾರು ಭಕ್ತರು ಕನ್ಟುಂಬಿಕೊಂಡರು.
ಗವಿಗಂಗಾಧರೇಶ್ವರ ದೇವಾಲಯ ಗೌತಮ ಮುನಿ ಹಾಗೂ ಭಾರದ್ವಾಜ ಮುನಿಗಳು ತಪಸ್ಸು ಮಾಡಿದ ಸ್ಥಳ ಎಂದು ಹೇಳಲಾಗುತ್ತದೆ. ಕಾಶಿಯವರೆಗೂ ಸುರಂಗ ಮಾರ್ಗವಿರುವ ನಿಗೂಢ ತಾಣ ಎಂಬ ಪ್ರತೀಥಿಯೂ ಇದೆ.




