ಭಾರತೀಯ ಮೂಲದ ಅಮೆರಿಕನ್ ಗಗನಯಾತ್ರಿ ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಭೂಮಿಗೆ ಮರಳುವುದನ್ನು ಸ್ಪೇಸ್‌ಎಕ್ಸ್‌ನ ಬಾಹ್ಯಾಕಾಶ ನೌಕೆ ಡ್ರ್ಯಾಗನ್‌ನಲ್ಲಿ ದೃಢಪಡಿಸಿರುವುದು ಗೊತ್ತಿರುವ ಸಂಗತಿಯೇ. ಇದೀಗ, ಭಾರತೀಯ ಕಾಲಮಾನ ಇಂದು ಬೆಳಿಗ್ಗೆ 10:35ಕ್ಕೆ ಬಾಹ್ಯಾಕಾಶ ನೌಕೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ (ಐಎಸ್‌ಎಸ್) ಬೇರ್ಪಟ್ಟಿದೆ. ಅಂದರೆ ಅನ್‌ಡಾಕ್ ಪ್ರಕ್ರಿಯೆ ಯಶಸ್ವಿಯಾಗಿ ನಡೆದಿದೆ. ಅದರ ವಿಡಿಯೋವನ್ನು ನಾಸಾ ತನ್ನ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದೆ.
ಡ್ರ್ಯಾಗನ್ ಅನ್ನು ಬೇರ್ಪಡಿಸುವುದು ಹಲವಾರು ಅಂಶಗಳನ್ನು ಅವಲಂಬಿಸಿದೆ. ಇದರಲ್ಲಿ ವಾಹನ ಮತ್ತು ಚೇತರಿಕೆ ತಂಡದ ಸಿದ್ಧತೆ, ಹವಾಮಾನ, ಸಮುದ್ರದ ಪರಿಸ್ಥಿತಿಗಳು ಮತ್ತು ಇತರ ಅಂಶಗಳೆಲ್ಲವೂ ಸೇರಿವೆ. ಕ್ರೂ-9 ಹಿಂದಿರುಗುವ ಹತ್ತಿರ ಸ್ಪ್ಲಾಶ್‌ಡೌನ್ ಸ್ಥಳವನ್ನು NASA ಮತ್ತು SpaceX ದೃಢೀಕರಿಸುತ್ತವೆ.
ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಜೂನ್ 5, 2024ರಂದು ಪರೀಕ್ಷಾ ವಾಹನ ಸ್ಟಾರ್‌ಲೈನರ್‌ನಲ್ಲಿ ISSಗೆ ಪಯಣ ಬೆಳೆಸಿದ್ದರು. ಎಂಟು ದಿನಗಳನ್ನು ಅಲ್ಲಿ ಕಳೆದ ನಂತರವೇ ಹಿಂತಿರುಗಬೇಕಿತ್ತು. ಆದರೆ ನೌಕೆಯಲ್ಲಿನ ದೋಷದಿಂದಾಗಿ ಇಬ್ಬರೂ ಸುಮಾರು 9 ತಿಂಗಳ ಕಾಲ ಐಎಸ್ಎಸ್ನಲ್ಲೇ ಸಿಲುಕಿದ್ದರು.
17 ಗಂಟೆಗಳ ಪಯಣ: ಇಂದು ಭಾರತೀಯ ಕಾಲಮಾನ ಬೆಳಗ್ಗೆ 10:35ಕ್ಕೆ ಅನ್‌ಡಾಕಿಂಗ್ ಪ್ರಕ್ರಿಯೆ ನಡೆಯಿತು. ಅಂದರೆ ಡ್ರ್ಯಾಗನ್ ಕ್ಯಾಪ್ಸುಲ್ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ (ISS) ಬೇರ್ಪಟ್ಟಿತ್ತು. ಇದು ಮಾರ್ಚ್ 19ರಂದು ಬೆಳಗಿನ ಜಾವ 3:27ರ ಸುಮಾರಿಗೆ ಫ್ಲೋರಿಡಾ ಕರಾವಳಿಯಲ್ಲಿ ಇಳಿಯಲಿದೆ. ಸುನೀತಾ ವಿಲಿಯಮ್ಸ್ ಅವರ ಬಾಹ್ಯಾಕಾಶದಿಂದ ಭೂಮಿಗೆ ಪ್ರಯಾಣ ಸುಮಾರು 17 ಗಂಟೆಗಳನ್ನು ತೆಗೆದುಕೊಳ್ಳುತ್ತದೆ.
ಗಗನಯಾತ್ರಿಗಳಿಬ್ಬರ ಸುರಕ್ಷಿತ ವಾಪಸಾತಿಗೆ ಪ್ರಪಂಚಾದ್ಯಂತ ಜನರು ಪ್ರಾರ್ಥಿಸುತ್ತಿದ್ದಾರೆ.
ಲೈವ್ ಸ್ಟ್ರೀಮಿಂಗ್: ಸ್ಪೇಸ್‌ಎಕ್ಸ್ ಕ್ರೂ-9 ಭೂಮಿಗೆ ಮರಳುವುದನ್ನು ಐಎಸ್‌ಎಸ್ ನೇರಪ್ರಸಾರ ಮಾಡಲಿದೆ ಎಂದು ನಾಸಾ ಈಗಾಗಲೇ ತಿಳಿಸಿದೆ. ನೇರಪ್ರಸಾರ ಸೋಮವಾರ ರಾತ್ರಿ 10:45ಕ್ಕೆ (ಭಾರತದಲ್ಲಿ ಮಾರ್ಚ್ 18ರಂದು ಬೆಳಗ್ಗೆ 8:30ಕ್ಕೆ) ಡ್ರ್ಯಾಗನ್ ಬಾಹ್ಯಾಕಾಶ ನೌಕೆಯ ಹ್ಯಾಚ್ ಮುಚ್ಚಲು ಸಿದ್ಧವಾಗುವುದರೊಂದಿಗೆ ಶುರುವಾಗಿದೆ. ಇದರ ನಂತರ, ನೌಕೆ ಇಳಿಯುವವರೆಗೆ ಸ್ಟ್ರೀಮಿಂಗ್ ಮುಂದುವರಿಯುತ್ತದೆ. ಬಾಹ್ಯಾಕಾಶಪ್ರೇಮಿಗಳು ಈ ಐತಿಹಾಸಿಕ ಘಟನೆಯನ್ನು ವೀಕ್ಷಿಸಬಹುದು ಎಂದು ನಾಸಾ ತಿಳಿಸಿದೆ.
ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಕಳೆದ ವರ್ಷ ಜೂನ್ 5ರಂದು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳಿದ್ದರು. ಅದಾದ ಬಳಿಕ ಕೇವಲ ಒಂದು ವಾರದ ನಂತರ ಭೂಮಿಗೆ ಮರಳಬೇಕಿತ್ತು. ಆದರೆ ಬೋಯಿಂಗ್ ಸ್ಟಾರ್‌ಲೈನರ್‌ನಲ್ಲಿನ ಅಸಮರ್ಪಕ ಕಾರ್ಯದಿಂದಾಗಿ ಇಬ್ಬರೂ ಅಲ್ಲಿಯೇ ಸಿಲುಕಿಕೊಂಡರು. ಬಾಹ್ಯಾಕಾಶದಲ್ಲಿ ವಾಸಿಸುತ್ತಿರುವಾಗಲೇ ಸುನೀತಾ ವಿಲಿಯಮ್ಸ್ ಅನೇಕ ಪ್ರಮುಖ ಸಂಶೋಧನೆಗಳನ್ನು ಮಾಡುವ ಮೂಲಕ ದಾಖಲೆಗಳನ್ನು ನಿರ್ಮಿಸಿದ್ದಾರೆ.
ಶುಕ್ರವಾರ (ಮಾರ್ಚ್ 14) ಸ್ಪೇಸ್‌ಎಕ್ಸ್ ಕ್ರೂ-10 ಮಿಷನ್ ಪ್ರಾರಂಭಿಸಿತು. ಕ್ರೂ ಡ್ರ್ಯಾಗನ್ ಕ್ಯಾಪ್ಸುಲ್ ಅನ್ನು ಫಾಲ್ಕನ್-9 ರಾಕೆಟ್ ಮೂಲಕ ಉಡಾಯಿಸಲಾಯಿತು. ಇದು ನಾಸಾದ ಕಮರ್ಶಿಯಲ್ ಕ್ರೂ ಪ್ರೊಗ್ರಾಂ ಅಡಿಯಲ್ಲಿ ISSಗೆ ಸಿಬ್ಬಂದಿ ಹೊಂದಿರುವ 11ನೇ ನೌಕೆ. ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಮಾರ್ಚ್ ಅಂತ್ಯದ ವೇಳೆಗೆ ಭೂಮಿಗೆ ಮರಳಬೇಕಿತ್ತು. ಆದರೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇಲಾನ್ ಮಸ್ಕ್ ಅವರಿಗೆ ಗಗನಯಾತ್ರಿಗಳನ್ನು ಬೇಗನೆ ಮರಳಿ ಕರೆತರುವಂತೆ ಒತ್ತಾಯಿಸಿದ ನಂತರ ಕಾರ್ಯಾಚರಣೆಯನ್ನು ಚುರುಕುಗೊಳಿಸಲಾಯಿತು.