ಬೆಂಗಳೂರು : ಇತ್ತೀಚೆಗೆ ಪತ್ನಿಯರ ಮೇಲೆ ಪಾಪಿ ಗಂಡಂದಿರ ದೌರ್ಜನ್ಯಗಳು ಹೆಚ್ಚಾಗ್ತಿದೆ. ಇಲ್ಲೊಬ್ಬ ದುಷ್ಟ ಹೆಂಡತಿಯನ್ನು ಕೊಂದು ಪೊಲೀಸ್ ಠಾಣೆಯಲ್ಲಿ ಶರಣಾಗಿದ್ದಾನೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲ್ಲೂಕಿನ ತಮ್ಮರಸನಹಳ್ಳಿಯ ಕೆರೆ ಸಮೀಪ ಘಟನೆ ನಡೆದಿದೆ.ಹೆಂಡತಿಯ ಕುತ್ತಿಗೆ ಹಿಸುಕಿ ಪಾಪಿ ಪತಿರಾಯ ಕೊಲೆ ಮಾಡಿದ್ದಾನೆ.
ಕೊಲೆ ಆರೋಪಿಯನ್ನು ನಿಜಾಮುದ್ದೀನ್ (38) ಎಂದು ಗುರುತಿಸಲಾಗಿದೆ. ರಾಬೀಯಾ (32) ಕೊಲೆಯಾದ ದುರ್ದೈವಿ ಹೆಂಡತಿ. ಅನೈತಿಕ ಸಂಬಂಧದ ಅನುಮಾನದಿಂದ ಹೆಂಡತಿಯ ಕೊಲೆ ನಡೆದಿದೆ ಎಂದು ಆರೋಪಿಸಲಾಗಿದೆ.ಇಬ್ಬರೂ ಮೂಲತಃ ದೇವನಹಳ್ಳಿ ತಾಲ್ಲೂಕಿನ ವಿಜಯಪುರ ಪಟ್ಟಣದ ನಿವಾಸಿಗಳು ಎಂದು ಗೊತ್ತಾಗಿದೆ.
ತಮ್ಮರಸನಹಳ್ಳಿ ಗ್ರಾಮದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ ದಂಪತಿ ನಡುವೆ ಆಗಾಗ್ಗೆ ಜಗಳ ಆಗುತ್ತಿತ್ತು. ಜಗಳ ವಿಕೋಪಕ್ಕೆ ಹೋಗಿ ಕೊಲೆ ನಡೆದಿದೆ.ಈ ಬಗ್ಗೆ ಸೂಲಿಬೆಲೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದ್ದು, ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ.




