ಭಾರತ U19 ಕ್ರಿಕೆಟ್ ತಂಡದ ತಾರೆ ವೈಭವ್ ಸೂರ್ಯವಂಶಿ ಮತ್ತೊಮ್ಮೆ ಇತಿಹಾಸದ ಪುಸ್ತಕದಲ್ಲಿ ತಮ್ಮ ಹೆಸರನ್ನು ಬರೆದಿದ್ದಾರೆ. ಈ ಬಾರಿ ಭಾರತ U19 ಇತಿಹಾಸದಲ್ಲಿ ಮೂರನೇ ವೇಗದ ಅರ್ಧಶತಕವನ್ನು ಬಾರಿಸುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. 14 ವರ್ಷದ ಈ ಆಟಗಾರ 31 ಎಸೆತಗಳಲ್ಲಿ 86 ರನ್ ಗಳಿಸಿ ಭಾರತಕ್ಕೆ ನಾರ್ಥಾಂಪ್ಟನ್ ವಿರುದ್ಧ ನಾಲ್ಕು ವಿಕೆಟ್ಗಳ ಜಯ ತಂದುಕೊಟ್ಟರು. ಐದು ಪಂದ್ಯಗಳ ಸರಣಿಯಲ್ಲಿ ಸದ್ಯ ಭಾರತ 2-1 ಮುನ್ನಡೆ ಪಡೆದಿದೆ.
ಸೂರ್ಯವಂಶಿ ಅರ್ಧಶತಕ ದಾಖಲಿಸಲು ಕೇವಲ 14 ಎಸೆತಗಳನ್ನು ತೆಗೆದುಕೊಂಡರು. ಉತ್ತಮ ಫಾರ್ಮ್ನಲ್ಲಿ ಕಂಡುಬಂದ ಅವರು ತಮ್ಮ ಇನಿಂಗ್ಸ್ನಲ್ಲಿ ಆರು ಬೌಂಡರಿಗಳು ಮತ್ತು ಒಂಬತ್ತು ಸಿಕ್ಸರ್ ಬಾರಿಸಿದರು ಮತ್ತು 277.41 ರ ಸ್ಟ್ರೈಕ್ ರೇಟ್ ಹೊಂದಿದ್ದರು. ಈ ಇನಿಂಗ್ಸ್ ಮೂಲಕ ವೈಭವ್, U19 ಏಕದಿನ ಇತಿಹಾಸದಲ್ಲಿ ಅತಿ ವೇಗದ 80 ರನ್ಗಳ ದಾಖಲೆಯನ್ನು ಹೊಂದಿದ್ದ ಸುರೇಶ್ ರೈನಾ ಅವರ ದಾಖಲೆ ಮುರಿದರು.
ಅಷ್ಟೇ ಅಲ್ಲದೆ, ಸೂರ್ಯವಂಶಿ ಅವರ ಈ ಅರ್ಧಶತಕವು ಯೂತ್ ಏಕದಿನ ಪಂದ್ಯಗಳಲ್ಲಿ ನಾಲ್ಕನೇ ವೇಗದ ಅರ್ಧಶತಕ ಮತ್ತು ರಿಷಭ್ ಪಂತ್ ನಂತರ ಭಾರತೀಯನೊಬ್ಬ ಗಳಿಸಿದ ಎರಡನೇ ಅರ್ಧಶತಕವಾಗಿತ್ತು. ಅವರು ಭಾರತದ ಪರ U19 ಏಕದಿನ ಪಂದ್ಯದಲ್ಲಿ ಅತಿ ಹೆಚ್ಚು ಸಿಕ್ಸರ್ಗಳನ್ನು ಬಾರಿಸಿದ ಭಾರತೀಯ ಆಟಗಾರ ಎಂಬ ದಾಖಲೆ ಬರೆದರು. ಈ ಹಿಂದೆ 8 ಸಿಕ್ಸರ್ಗಳನ್ನು ಬಾರಿಸಿದ್ದ ಮಂದೀಪ್ ಸಿಂಗ್ ಅವರ ದಾಖಲೆಯನ್ನು ಮುರಿದರು.




