ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ಮಾಘ ಮೇಳ ಆರಂಭವಾಗಿದೆ. ಜನವರಿ-ಫೆಬ್ರವರಿಯಲ್ಲಿ ನಡೆಯುವ ಈ ಮೇಳದಲ್ಲಿ ಲಕ್ಷಾಂತರ ಮಂದಿ ಪಾಲ್ಗೊಳ್ಳುತ್ತಾರೆ.
ಜನ ಸಾಮಾನ್ಯರ ಜತೆ ಸಾವಿರಾರು ತಪಸ್ವಿಗಳು, ಸಾಧುಗಳು ಭಾಗವಹಿಸಿದ್ದಾರೆ. ಇವರೆಲ್ಲದರ ಮಧ್ಯೆ ಈ ಮೇಳದಲ್ಲಿ ತಪಸ್ವಿಯೊಬ್ಬರು ಗಮನ ಸೆಳೆದಿದ್ದಾರೆ.
ಲಕ್ಷಾಂತರ ಸಾಧುಗಳ ನಡುವೆ ‘ಗೂಗಲ್ ಗೋಲ್ಡನ್ ಬಾಬಾ’ ಎಂದು ಖ್ಯಾತ ಪಡೆದಿರುವ ಇವರು ಭಕ್ತರ ಮತ್ತು ಪ್ರವಾಸಿಗರ ಪ್ರಮುಖ ಆಕರ್ಷಣೆಯ ಕೇಂದ್ರ ಬಿಂದು ಎನಿಸಿಕೊಂಡಿದ್ದಾರೆ.
ಸದ್ಯ ಅವರ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಹಾಗಾದರೆ ಏನಿವರ ವಿಶೇಷತೆ, ಅವರ ಹಿನ್ನೆಲೆ ಏನು? ಎನ್ನುವುದನನು ನೋಡಿಕೊಂಡು ಬರೋಣ.
‘ಗೂಗಲ್ ಗೋಲ್ಡನ್ ಬಾಬಾ’ ಎಂದು ಕರೆಯಲ್ಪಡುವ ಕಾನ್ಪುರದ ತಪಸ್ವಿ ಇವರಾಗಿದ್ದು, ತಮ್ಮ ದೇಹದ ಮೇಲೆ ಸುಮಾರು 5 ಕೋಟಿ ರುಪಾಯಿ ಮೌಲ್ಯದ ಚಿನ್ನ ಮತ್ತು ಬೆಳ್ಳಿಯ ಆಭರಣಗಳನ್ನು ಧರಿಸಿದ್ದಾರೆ.
ಇವರು ತಲೆಯಿಂದ ಕಾಲಿನವರೆಗೆ ಚಿನ್ನದ ಆಭರಣಗಳಲ್ಲಿ ಮುಳುಗಿ ಹೋಗಿದ್ದಾರೆ. ಬೆಳ್ಳಿ ಪಾತ್ರೆಗಳಿಂದ ಊಟ ಮಾಡುವುದು ಮತ್ತು ಹೋದಲ್ಲೆಲ್ಲ ಲಡ್ಡು ಗೋಪಾಲನ ಚಿನ್ನದ ವಿಗ್ರಹವನ್ನು ಒಯ್ಯುವುದು ಮುಂತಾದವುಗಳಿಂದ ಗಮನ ಸೆಳೆಯುತ್ತಿದ್ದಾರೆ.




