ಏಪ್ರಿಲ್ 22ರಂದು ಭಾರತದ ಅತ್ಯಂತ ಸುಂದರ ಪ್ರವಾಸಿ ತಾಣ ಜಮ್ಮು ಕಾಶ್ಮೀರದ ಪಹಲ್ಗಾಮ್ನ ಬೈಸರನ್ನಲ್ಲಿ ಉಗ್ರರ ಅಟ್ಟಹಾಸ ನಡೆದಿತ್ತು. ಮಂಗಳವಾರ, ನಡೆದ ಪೈಶಾಚಿಕ ಉಗ್ರರ ದಾಳಿಯಲ್ಲಿ 26 ಅಮಾಯಕರು ಕೊನೆಯುಸಿರೆಳೆದರು. ಭಯೋತ್ಪಾದಕರ ಹೀನ ಕೃತ್ಯಕ್ಕೆ ದೇಶಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ದುರ್ಘಟನೆಗೆ ಪ್ರತೀಕಾರವಾಗಿ ಭಾರತ ಬುಧವಾರ ಮುಂಜಾನೆ ಪಾಕ್ನಲ್ಲಿನ ಭಯೋತ್ಪಾದಕ ತಾಣಗಳ ಮೇಲೆ ದಾಳಿ ನಡೆಸಿತು.
ಅಂದು ‘ಆಪರೇಷನ್ ಸಿಂಧೂರ’ ಅಡಿ ಪಾಕ್ ಆಕ್ರಮಿತ ಕಾಶ್ಮೀರ ಮತ್ತು ಪಾಕಿಸ್ತಾನದೊಳಗಿನ ಒಟ್ಟು 9 ಭಯೋತ್ಪಾದಕ ತಾಣಗಳನ್ನು ಧ್ವಂಸಗೊಳಿಸಿತು. ಆನಂತರ ಎರಡೂ ರಾಷ್ಟ್ರಗಳಿಂದ ದಾಳಿ – ಪ್ರತಿದಾಳಿ ನಡೆಯುತ್ತಿದೆ. ಭಾರತ ಉಗ್ರನೆಲೆಗಳನ್ನಷ್ಟೇ ಗುರಿಯಾಗಿಸಿ ದಾಳಿ ಮಾಡಿದೆ. ನಮ್ಮ ಭಾರತದ ಸಶಸ್ತ್ರ ಪಡೆಗಳ ಶೌರ್ಯಕ್ಕೆ ದೇಶಾದ್ಯಂತ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಆಶ್ವಿನಿ ಪುನೀತ್ ರಾಜ್ಕುಮಾರ್ ಪೋಸ್ಟ್: ಭಾರತ ಚಿತ್ರರಂಗದ ಹೆಸರಾಂತರೂ ಕೂಡಾ ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ. ಅದರಂತೆ, ಕನ್ನಡ ಚಿತ್ರರಂಗದ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್ಕುಮಾರ್ ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಸ್ಟೋರಿ ಸೆಕ್ಷನ್ನಲ್ಲಿ, ಸಶಸ್ತ್ರ ಪಡೆಗಳಿಗೆ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿ, ಬೆಂಬಲ ಸೂಚಿಸಿದ್ದಾರೆ.