ತುರುವೇಕೆರೆ: ಜನಸಾಮಾನ್ಯರ ತುರ್ತು ಅಗತ್ಯತೆಗೆ ಸಾಲ ನೀಡುವ ಮೈಕ್ರೋಫೈನಾನ್ಸ್ ಗಳು ಮಾನವೀಯತೆ ಮರೆತು ಬಲವಂತವಾಗಿ ಕಿರುಕುಳ ನೀಡಿ ಸಾಲ ವಸೂಲಾತಿಗೆ ಮುಂದಾದಲ್ಲಿ ಯಾವುದೇ ಮುಲಾಜಿಲ್ಲದೆ ಕಾನೂನು ರೀತಿಯ ಕ್ರಮ ಜರುಗಿಸಲಾಗುವುದು ಎಂದು ತಹಸೀಲ್ದಾರ್ ಕುಂಞ ಅಹಮದ್ ಖಡಕ್ ಎಚ್ಚರಿಕೆ ನೀಡಿದರು.
ರಾಜ್ಯದ ವಿವಿದೆಢೆ ಸಾಲ ವಸೂಲಾತಿಗಾಗಿ ಮೈಕ್ರೋ ಫೈನಾನ್ಸ್ ನವರ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆ, ಗ್ರಾಮ ತೊರೆದಿರುವಂತಹ ಘಟನೆಗಳು ನಡೆದಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಆದೇಶದಂತೆ ಪಟ್ಟಣದ ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ತಾಲೂಕಿನ ಸುಮಾರು 38 ಕ್ಕೂ ಅಧಿಕ ಮೈಕ್ರೋ ಫೈನಾನ್ಸ್ ಗಳವರೊಂದಿಗಿನ ಸಭೆಯಲ್ಲಿ ಸಾಲ ಪಡೆದ ಬಡ ಜನರಿಗೆ ಅನಗತ್ಯ ಕಿರುಕುಳ ನೀಡಿ ಸಾಲ ವಸೂಲಿಗೆ ಮುಂದಾದರೆ ಕಾನೂನು ಕ್ರಮ ಜರುಗಿಸುವ ಎಚ್ಚರಿಕೆಯ ಸಂದೇಶ ರವಾನಿಸಿದರು.
ರಾಷ್ಟ್ರೀಯ ಬ್ಯಾಂಕುಗಳು ಜನಸಾಮಾನ್ಯರಿಗೆ ಸಾಲ ನೀಡಲು ಹಲವಾರು ಷರತ್ತು, ನಿಬಂಧನೆಗಳನ್ನು ವಿಧಿಸುತ್ತದೆ. ಅದನ್ನು ಪೂರೈಸಲು ಜನಸಾಮಾನ್ಯರಿಗೆ ಸಾಧ್ಯವಾಗುತ್ತಿಲ್ಲ, ಇಂತಹ ಪರಿಸ್ಥಿತಿಯಲ್ಲಿ ಕುಟುಂಬದ ಸಂಕಷ್ಟಗಳ ನಿವಾರಣೆಗೆ, ಮಕ್ಕಳ ವಿದ್ಯಾಬ್ಯಾಸಕ್ಕೆ, ಮದುವೆಗೆ ಮುಂತಾದವುಗಳಿಗೆ ಬೇರೆ ದಾರಿಯಿಲ್ಲದೆ ಮೈಕ್ರೋ ಫೈನಾನ್ಸ್ ನವರ ಬಳಿ ಸಾಲ ಪಡೆಯಲು ಮುಂದಾಗುತ್ತಿದ್ದಾರೆ. ಹಣಕಾಸು ಸಂಸ್ಥೆಗಳು, ಮೈಕ್ರೋ ಫೈನಾನ್ಸ್ ಗಳು ಆರ್.ಬಿ.ಐ. ನ ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು. ಆರ್.ಬಿ.ಐ. ನಿಯಮಗಳನ್ನು ಗಾಳಿಗೆ ತೂರಿ ಹಣಕಾಸು ವ್ಯವಹಾರ ನಡೆಸುವ ಯಾವುದೇ ಸಂಸ್ಥೆಯ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದ ಅವರು, ಸಾಲ ನೀಡಿದ್ದೇವೆ, ಸಾಲ ವಸೂಲಿ ಮಾಡಬೇಡವೇ ಎಂಬ ದಾಷ್ಟ್ಯದಿಂದ ಬಡಜನರಿಗೆ ಕಿರುಕುಳ ನೀಡುವುದನ್ನು ಮಾಡಿದರೆ ಸಹಿಸುವುದಿಲ್ಲ. ಹಣಕಾಸಿನ ವ್ಯವಹಾರ ಮಾಡುವ ವ್ಯಕ್ತಿಗಳು ಸಂಬಂಧಿಸಿದ ಪ್ರಾಧಿಕಾರದಿಂದ ಹಣಕಾಸು ವ್ಯವಹಾರ ನಡೆಸುವ ಬಗ್ಗೆ ಪರವಾನಗಿ ಪಡೆಯಬೇಕು. ಚೆಕ್ ಮೂಲಕ ವ್ಯವಹಾರ ನಡೆಸುವುದು, ದಿನ, ವಾರ, ತಿಂಗಳ ಬಡ್ಡಿ ಆಧಾರದಲ್ಲಿ ತಮ್ಮ ಬಳಿ ಹಣವಿದೆ ಎಂದು ಬಡ್ಡಿ ಆಸೆಗೆ ಹಣ ನೀಡಿ ನಂತರ ಅವರನ್ನು ಶೋಷಣೆಗೆ ಒಳಪಡಿಸುವುದು ಸರಿಯಲ್ಲ. ಈ ಹಿಂದೆ ಹೆಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭಧಲ್ಲಿ ಸರ್ಕಾರ ಬಡ್ಡಿ ವ್ಯವಹಾರ ನಡೆಸುವವರ ವಿರುದ್ಧ ಕಠಿಣ ಕಾನೂನನ್ನು ಜಾರಿಗೊಳಿಸಿದೆ. ಮೈಕ್ರೋ ಫೈನಾನ್ಸ್ ಅಥವಾ ಯಾವುದೇ ಹಣಕಾಸು ಸಂಸ್ಥೆಗಳಿಂದ ನಮಗೆ ಕಿರುಕುಳವಾಗುತ್ತಿದೆ ಎಂದು ಸಾರ್ವಜನಿಕರು ದೂರು ನೀಡಿದರೆ ಅಂತಹ ಫೈನಾನ್ಸ್ ಕಂಪನಿಗಳ ವ್ಯವಸ್ಥಾಪಕರು ಮತ್ತು ಸಿಬ್ಬಂದಿ ವರ್ಗದವರ ಮೇಲೆ ಯಾವುದೇ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಸಭೆಯಲ್ಲಿ ಕೇವಲ ಮೈಕ್ರೋ ಫೈನಾನ್ಸ್ ಗಳ ವಿಷಯವಷ್ಟೇ ಅಲ್ಲದೆ ಬಡ್ಡಿಗೆ ಸಾಲ ನೀಡುವುದು, ಯಂತ್ರೋಪಕರಣ ಸಾಲ, ಗೃಹಪಯೋಗಿ ವಸ್ತುಗಳ ಮೇಲೆ ಸಾಲ, ವಾಹನ ಸಾಲ ನೀಡುವವರ ಬಗ್ಗೆಯೂ ಪ್ರಸ್ತಾಪವಾಯಿತು. ಮೈಕ್ರೋ ಫೈನಾನ್ಸ್ ಕಂಪನಿಗಳು ಜನರಿಗೆ ವಿಧಿಸುವ ಬಡ್ಡಿ ದರವನ್ನು ಕಡಿಮೆ ಮಾಡಬೇಕು, ಕಂತುಗಳು ಮತ್ತು ಬಡ್ಡಿ ವಸೂಲಿಯ ಅವಧಿಯನ್ನು ಪರಿಷ್ಕರಣೆ ಮಾಡಿ ಜನರಿಗೆ ಅನುಕೂಲ ಮಾಡಿಕೊಡಬೇಕು. ರಾಷ್ಟ್ರೀಕೃತ ಬ್ಯಾಂಕುಗಳಲ್ಲಿರುವಂತೆ ಸಾಲ ಮರುಪಾವತಿಗೆ ಸಂಬಂಧಿಸಿದಂತೆ ಸಾಲ ನೀಡಲು, ಸಾಲ ಹಿಂಪಡೆಯಲು ಸರಳ ಷರತ್ತುಗಳನ್ನು ಅಳವಡಿಸಿಕೊಳ್ಳಬೇಕೆಂಬ ಅಭಿಪ್ರಾಯ ವ್ಯಕ್ತವಾಯಿತು. ಸಭೆಯಲ್ಲಿ ತಾಲೂಕಿನಲ್ಲಿರುವ ಸುಮಾರು ೩೮ಕ್ಕೂ ಅಧಿಕ ಮೈಕ್ರೋ ಫೈನಾನ್ಸ್ ಕಂಪನಿಗಳ ಅಧಿಕಾರಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು.
ವರದಿ: ಗಿರೀಶ್ ಕೆ ಭಟ್