ತುರುವೇಕೆರೆ: ತಾಲ್ಲೂಕು ಕೃಷಿಕ ಸಮಾಜದ ಅಧ್ಯಕ್ಷರಾಗಿ ತಾಳಕೆರೆಯ ಟಿ.ಎಸ್.ಶ್ರೀಕಾಂತ್ ಅವಿರೋಧವಾಗಿ ಆಯ್ಕೆಯಾದರು.
ಕೆಲವು ದಿನಗಳ ಹಿಂದೆ ನಡೆದ ತಾಲ್ಲೂಕು ಕೃಷಿಕ ಸಮಾಜದ 2025 ರಿಂದ 2029 ರ ಅವಧಿಗೆ 15 ಮಂದಿ ಕಾರ್ಯಕಾರಿ ಸಮಿತಿ ಸದಸ್ಯರ ಆಯ್ಕೆಗೆ ಚುನಾವಣೆ ನಡೆದಿತ್ತು. ಈ ಚುನಾವಣೆಯಲ್ಲಿ ತಾಳಕೆರೆಯ ಟಿ.ಎಸ್.ಶ್ರೀಕಾಂತ್, ಕಡೇಹಳ್ಳಿ ಕೆ.ಎಲ್.ರಾಮಚಂದ್ರಪ್ಪ, ದುಂಡ ಸುರೇಶ್, ತುರುವೇಕೆರೆಯ ಎನ್.ಆರ್.ಸುರೇಶ್, ಹಾವಾಳದ ಹೆಚ್.ಆರ್.ರಾಮೇಗೌಡ, ಮುತ್ತುಗದಹಳ್ಳಿಯ ಎಂ.ಕೆ.ಕೆಂಪರಾಜು, ಎಂ.ಬೇವಿನಹಳ್ಳಿಯ ಬಿ.ಎಸ್.ಬಸವರಾಜು, ದೇವಿಹಳ್ಳಿಯ ಡಿ.ಜೆ.ಬಸವರಾಜು, ಚಿಕ್ಕಪುರದ ನೀಲಕಂಠಯ್ಯ, ಹೊಣಕೆರೆಯ ಬಿ.ಎಂ.ದೇವರಾಜು, ಬ್ಯಾಡರಹಳ್ಳಿಯ ದೇವರಾಜು, ಕಲ್ಲುನಾಗತಿಹಳ್ಳಿಯ ರವಿಕುಮಾರ್, ಡೊಂಕೀಹಳ್ಳಿಯ ಡಿ.ಪಿ. ರಾಜು, ಮಲ್ಲಾಘಟ್ಟದ ಬ್ಯಾಟರಂಗಪ್ಪ, ಕೊಡಗೀಹಳ್ಳಿಯ ಶೇಷೇಗೌಡ ಅವರುಗಳು ಅವಿರೋಧವಾಗಿ ಆಯ್ಕೆಯಾಗಿದ್ದರು.
ಈ ಪೈಕಿ ಸಮಾಜದ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಆಯ್ಕೆಗೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ತಾಳಕೆರೆಯ ಟಿ.ಎಸ್.ಶ್ರೀಕಾಂತ್, ಉಪಾಧ್ಯಕ್ಷರಾಗಿ ದುಂಡ ಸುರೇಶ್, ಪ್ರಧಾನ ಕಾರ್ಯದರ್ಶಿಯಾಗಿ ಕಡೇಹಳ್ಳಿ ಕೆ.ಎಲ್.ರಾಮಚಂದ್ರಪ್ಪ, ಖಜಾಂಚಿಯಾಗಿ ದೇವಿಹಳ್ಳಿಯ ಬಸವರಾಜು ಹಾಗೂ ಜಿಲ್ಲಾ ಪ್ರತಿನಿಧಿಯಾಗಿ ಎನ್.ಆರ್.ಸುರೇಶ್ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿಯಾಗಿದ್ದ ಸಹಾಯಕ ಕೃಷಿ ನಿರ್ದೇಶಕಿ ಪೂಜಾ ಘೋಷಿಸಿದರು.
ತಾಲ್ಲೂಕು ಕೃಷಿಕ ಸಮಾಜದಲ್ಲಿ 790 ಸದಸ್ಯರಿದ್ದಾರೆ. ಕೃಷಿಕ ಸಮಾಜದ ಪದಾಧಿಕಾರಿಗಳು ತಮ್ಮ ಕ್ಷೇತ್ರ ವ್ಯಾಪ್ತಿಯ ರೈತರಿಗೆ ಸರ್ಕಾರ ಕೃಷಿಕರಿಗಾಗಿ ರೂಪಿಸುವ ಎಲ್ಲಾ ಯೋಜನೆಗಳ ಮಾಹಿತಿಯನ್ನು ಮಾಹಿತಿ ನೀಡುವುದರ ಜೊತೆಗೆ ಅರ್ಹ ಫಲಾನುಭವಿಗಳಿಗೆ ಸವಲತ್ತು ದೊರೆಯುವಂತೆ ಮಾಡುವುದು ಸಮಾಜದ ಪ್ರಮುಖ ಉದ್ದೇಶವಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕಿ ಪೂಜಾ ತಿಳಿಸಿದರು.
ಕೃಷಿಕ ಸಮಾಜದ ನೂತನ ಅಧ್ಯಕ್ಷ ತಾಳಕೆರೆಯ ಟಿ.ಎಸ್.ಶ್ರೀಕಾಂತ್ ಮಾತನಾಡಿ, ರೈತರೇ ದೇಶದ ಬೆನ್ನೆಲುಬು. ರೈತರಿಗೆ ನೆರವಾಗುವಂತಹ ಸಮಾಜದ ಅಧ್ಯಕ್ಷ ಸ್ಥಾನ ನನಗೆ ಅವಿರೋಧವಾಗಿ ದೊರೆತಿರುವುದು ನನ್ನ ಸೌಭಾಗ್ಯ. ಅಧ್ಯಕ್ಷನಾಗಿ ಅವಿರೋಧವಾಗಿ ಆಯ್ಕೆ ಮಾಡಿದ ಎಲ್ಲಾ ಪದಾಧಿಕಾರಿಗಳಿಗೆ ಧನ್ಯವಾದಗಳನ್ನು ಅರ್ಪಿಸುವುದಾಗಿ ಹೇಳಿದರು.
ಸರ್ಕಾರ ರೈತರಿಗಾಗಿ ಸಾಕಷ್ಟು ಯೋಜನೆಗಳನ್ನು ರೂಪಿಸುತ್ತಿದೆ, ಇಲಾಖೆ ರೈತರಿಗೆ ಎಷ್ಟೇ ಯೋಜನೆ ಬಗ್ಗೆ ತಿಳಿಸಿದರೂ ಸಹ ನೇರವಾಗಿ ರೈತರು ಇಲಾಖೆಗೆ ಬಂದು ಸಂಬಂಧಿಸಿದ ದಾಖಲೆ ನೀಡಿ ಸವಲತ್ತು ಪಡೆಯುವುದು ಬಹಳ ಕಷ್ಟವಾಗುತ್ತಿದೆ. ಇದು ಮಧ್ಯವರ್ತಿಗಳಿಗೆ ಅನುಕೂಲವಾಗಿ ರೈತರಿಗೆ ಅನ್ಯಾಯವಾಗುತ್ತಿದೆ ಎಂದ ಅವರು, ಕೃಷಿಕ ಸಮಾಜದ ಎಲ್ಲಾ ಪದಾಧಿಕಾರಿಗಳ ಸಹಕಾರದೊಂದಿಗೆ ಸರ್ಕಾರದಿಂದ ರೈತರಿಗೆ ಬರುವ ಎಲ್ಲಾ ಯೋಜನೆ, ಸವಲತ್ತುಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತೇನೆ ಎಂದರು.
ತಾಲ್ಲೂಕಿನಲ್ಲಿ ಕೃಷಿಕ ಸಮಾಜ ಸದೃಢವಾಗಿದ್ದರೂ ಕೃಷಿಕರಿಗಾಗಿಯೇ ಶ್ರಮಿಸುತ್ತಿರುವ ಸಮಾಜಕ್ಕೆ ಒಂದು ಕಟ್ಟಡದ ಕೊರತೆ ಕಾಡುತ್ತಿದೆ. ರೈತರು ತಮ್ಮ ಸಮಸ್ಯೆಗಳನ್ನು ಬಂದು ಹೇಳಿಕೊಳ್ಳಲು ವ್ಯವಸ್ಥಿತ ಹಾಗೂ ಸುಸಜ್ಜಿತವಾದ ಕೃಷಿಕ ಸಮಾಜದ ಕಟ್ಟಡ ನಿರ್ಮಾಣದ ಗುರಿಯನ್ನು ಹೊಂದಲಾಗಿದೆ. ಇದಕ್ಕೆ ಸಮಾಜದ ಪದಾಧಿಕಾರಿಗಳು, ರೈತರು, ಜನಪ್ರತಿನಿಧಿಗಳ ಸಹಕಾರ ಅತ್ಯಗತ್ಯವಾಗಿದೆ ಎಂದರು.
ಇದೇ ಸಂದರ್ಭದಲ್ಲಿ ನೂತನ ಅಧ್ಯಕ್ಷ ಹಾಗೂ ಪದಾಧಿಕಾರಿಗಳನ್ನು ಬೆಂಬಲಿಗರು, ಹಿತೈಷಿಗಳು ಆತ್ಮೀಯವಾಗಿ ಅಭಿನಂದಿಸಿದರು.
ವರದಿ: ಗಿರೀಶ್ ಕೆ ಭಟ್