ನವದೆಹಲಿ: ಮೀಸಲು ಪಡೆಯುವ ವರ್ಗಕ್ಕೆ ಸೇರಿದವರು ಸಾಮಾನ್ಯ ವರ್ಗದ ಕಟಾಫ್ ಗಿಂತಲೂ ಹೆಚ್ಚಿನ ಅಂಕ ಪಡೆದಿದ್ದರೆ, ಅವರನ್ನು ಸಾಮಾನ್ಯ ವರ್ಗದ ಉದ್ಯೋಗ ನೇಮಕಾತಿಗೂ ಪರಿಗಣಿಸಬೇಕು ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ.
2013ರಲ್ಲಿ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ(ಎಎಐ) 245 ಹುದ್ದೆಗಳ ನೇಮಕಾತಿ ಸಂಬಂಧ ಕೇರಳ ಹೈಕೋರ್ಟ್ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಈ ಮಹತ್ವದ ಆದೇಶ ನೀಡಿದೆ.
ಮೀಸಲಿಲ್ಲದ ಹುದ್ದೆಗೆ ಅತ್ಯುತ್ತಮ ಅಂಕ ಪಡೆದ ಅಲ್ಪಸಂಖ್ಯಾತ ಅಭ್ಯರ್ಥಿಯ ಬದಲಿಗೆ, ಸಾಮಾನ್ಯ ವರ್ಗದವರನ್ನು ನೇಮಿಸುವಂತೆ 2020ರಲ್ಲಿ ಕೇರಳ ಹೈಕೋರ್ಟ್ ಆದೇಶಿಸಿತ್ತು.
ಇದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾ| ಎಂ.ಎಂ. ಸುಂದರೇಶ್ ಮತ್ತು ಸತೀಶ್ ಚಂದ್ರ ಅವರ ಪೀಠ, SC, ST, OBC ಯಂತಹ ಮೀಸಲು ವರ್ಗಕ್ಕೆ ಸೇರಿದವರು ಸಾಮಾನ್ಯ ವರ್ಗದವರಿಗೆ ಅಂಕಗಳಿಗಿಂತ ಹೆಚ್ಚು ಅಂಕಗಳನ್ನು ಪಡೆದರೆ ಅವರಿಗೆ ಮೀಸಲಾತಿಗೆ ಒಳಪಡದ ಸೀಟು ನೀಡಬೇಕು ಎಂದು ಸುಪ್ರೀಂಕೋರ್ಟ್ ಹೇಳಿದೆ.
2013ರಲ್ಲಿ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ(ಎಎಐ) 245 ಹುದ್ದೆಗಳಿಗೆ ನೇಮಕಾತಿ ಮಾಡಿತ್ತು. ಈ ವೇಳೆ, ಮೀಸಲಾತಿಗೆ ಒಳಪಡದ 122 ಸೀಟುಗಳಿಗೆ ಸಾಮಾನ್ಯ ವರ್ಗ ಹಾಗೂ ಅಲ್ಪಸಂಖ್ಯಾತ ವರ್ಗದವರನ್ನು ನೇಮಿಸಿತ್ತು. ಇದನ್ನು ಪ್ರಶ್ನಿಸಿ, ಸಾಮಾನ್ಯ ವರ್ಗಕ್ಕೆ ಸೇರಿದ್ದ ಶ್ಯಾಮ್ ಕೃಷ್ಣ ಎಂಬುವವರು ಕೋರ್ಟ್ ಮೆಟ್ಟಿಲೇರಿದ್ದರು.




