ತುರುವೇಕೆರೆ: ಸಿಇಟಿ ಪರೀಕ್ಷೆ ವೇಳೆ ಬ್ರಾಹ್ಮಣ ಸಮುದಾಯಕ್ಕೆ ಸೇರಿದ ವಿದ್ಯಾರ್ಥಿಯೋರ್ವ ಧರಿಸಿದ್ದ ಯಜ್ಞೋಪವೀತ (ಜನಿವಾರ) ಕತ್ತರಿಸಿ ತೆಗೆಸಿದ್ದನ್ನು ಖಂಡಿಸಿ ತಾಲ್ಲೂಕು ಬ್ರಾಹ್ಮಣ ಸಭಾ ಇಂದು ಪ್ರತಿಭಟನೆ ನಡೆಸಿತು.
ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ಹಾಗೂ ಬೀದರ್ ನ ಕಾಲೇಜುಗಳಲ್ಲಿ ಏಪ್ರಿಲ್ 17 ರಂದು ಸಿಇಟಿ ಪರೀಕ್ಷೆ ಸಂದರ್ಭ ಪರೀಕ್ಷೆ ಬರೆಯಲು ಬಂದ ಬ್ರಾಹ್ಮಣ ಸಮುದಾಯಕ್ಕೆ ಸೇರಿದ ವಿದ್ಯಾರ್ಥಿಯೋರ್ದ ಧರಿಸಿದ್ದ ಯಜ್ಞೋಪವೀತ (ಜನಿವಾರ) ಕತ್ತರಿಸಿ ತೆಗೆದಿರುವುದು ಸಮುದಾಯದ ಧಾರ್ಮಿಕ ಭಾವನೆಗೆ ನೋವುಂಟು ಮಾಡಿ. ಬ್ರಹ್ಮೋಪದೇಶ ಸಂದರ್ಭದಲ್ಲಿ ಯಜ್ಞೋಪವೀತ ಧಾರಣೆ ಮಾಡಿ ಗಾಯತ್ರಿ ಮಂತ್ರ ಉಪದೇಶ ಪಡೆಯುವುದು ಬ್ರಾಹ್ಮಣ ಸಮುದಾಯದ ಹಕ್ಕು ಮತ್ತು ಕರ್ತವ್ಯವಾಗಿದೆ. ಪರಮ ಪವಿತ್ರವಾದ ಜನಿವಾರವನ್ನು ಕತ್ತರಿಸಿ ತೆಗೆಸಿರುವುದು ಸಮುದಾಯದ ಧಾರ್ಮಿಕ ಆಚರಣೆಗೆ ಧಕ್ಕೆಯುಂಟು ಮಾಡಿದೆ. ಅಲ್ಲದೆ ಸಿಇಟಿ ನಿಯಮಾವಳಿಗಳಲ್ಲಿ ಜನಿವಾರ ತೆಗೆಸುವ ಬಗ್ಗೆ ಯಾವುದೇ ನಿಯಮ, ಉಲ್ಲೇಖವಿಲ್ಲದಿದ್ದರೂ ಈ ರೀತಿ ಸಮುದಾಯದ ಧಾರ್ಮಿಕ ಹಕ್ಕನ್ನು ಮೊಟುಕುಗೊಳಿಸುವ ಕೃತ್ಯ ಆತಂಕಕಾರಿಯಾಗಿದೆ. ಈ ಕ್ರಮವನ್ನು ತಾಲ್ಲೂಕು ಬ್ರಾಹ್ಮಣ ಸಭಾ ತೀವ್ರವಾಗಿ ಖಂಡಿಸುತ್ತದೆ.
ಯಜ್ಞೋಪವೀತವನ್ನು ಕತ್ತರಿಸಿ ತೆಗೆದು ಬ್ರಾಹ್ಮಣ ಸಮುದಾಯದ ಧಾರ್ಮಿಕ ಭಾವನೆಗೆ ಧಕ್ಕೆ ಉಂಟು ಮಾಡಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಮುಂದಿನ ದಿನಗಳಲ್ಲಿ ಇಂತಹ ಘಟನೆ ಮರುಕಳಿಸದಂತೆ ಎಚ್ಚರವಹಿಸಬೇಕೆಂದು ಆಗ್ರಹಿಸಿ ತಾಲ್ಲೂಕು ಬ್ರಾಹ್ಮಣ ಸಭಾ ವತಿಯಿಂದ ಗ್ರೇಡ್ ೨ ತಹಸೀಲ್ದಾರ್ ಸುಮತಿ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ತಾಲ್ಲೂಕು ಬ್ರಾಹ್ಮಣ ಸಭಾ ಅಧ್ಯಕ್ಷ ಸತ್ಯನಾರಾಯಣ್, ಕಾರ್ಯದರ್ಶಿ ರವಿಶಂಕರ್, ಬ್ರಾಹ್ಮಣ ಸಭಾ ಮಾಜಿ ಅಧ್ಯಕ್ಷ ಅಮಾನಿಕರೆ ಮಂಜುನಾಥ್, ನಿರ್ದೇಶಕರಾದ ಶ್ರೀನಿವಾಸ್, ಗಿರೀಶ್ ಕೆ ಭಟ್, ಪ್ರಾಣೇಶ್, ರಾಘವೇಂದ್ರ, ರಾಮಚಂದ್ರ, ಕೃಷ್ಣ ಚೈತನ್ಯ, ಲಕ್ಷ್ಮೀನಾರಾಯಣ್, ಯೋಗಾನಂದ್, ಗುರುಪ್ರಸಾದ್ ಮುಂತಾದವರಿದ್ದರು.
ವರದಿ: ಗಿರೀಶ್ ಕೆ ಭಟ್