ಸಿರುಗುಪ್ಪ : ನಗರದ ಶ್ರೀ ನೀಲಕಂಠೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ. ಟ್ರಸ್ಟ್ ವತಿಯಿಂದ ನಡೆದ ತಾಲೂಕು ಮಟ್ಟದ ಮಹಿಳಾ ವಿಚಾರ ಗೋಷ್ಠಿ ಕಾರ್ಯಕ್ರಮವನ್ನು ನಗರಸಭೆ ಅಧ್ಯಕ್ಷೆ ಬಿ.ರೇಣುಕಮ್ಮ ವೆಂಕಟೇಶ್ ಅವರು ಉದ್ಘಾಟಿಸಿದರು.
ಜಿಲ್ಲಾ ನಿರ್ದೇಶಕ ರೋಹಿತಾಕ್ಷ ಅವರು ಮಾತನಾಡಿ ಸ್ವಸಹಾಯ ಸಂಘಗಳಿಂದಾಗಿ ಮಹಿಳೆಯರು ಸಂಘಟಿತರಾಗುತ್ತಿದ್ದು, ಮಾತೃಶ್ರೀ ಡಾ.ಡಿ.ಹೇಮಾವತಿ ಅಮ್ಮನವರ ಆಶಯದಂತೆ ಮಹಿಳೆಯರಿಗೆ ಕಾನೂನು ನೆರವು, ಸರ್ಕಾರದ ಸೌಲಭ್ಯ, ಸ್ವಚ್ಛತೆ ಜಾಗೃತಿ ಬಗ್ಗೆ ಜ್ಞಾನ ವಿಕಾಸ ಕೇಂದ್ರಗಳಲ್ಲಿ ಅರಿವು ಮೂಡಿಸಲಾಗುತ್ತಿದೆ.
ನಮ್ಮ ಯೋಜನೆಯಿಂದ ಜೊತೆಗೆ ಅಶಕ್ತರಿಗೆ, ನಿರ್ಗತಿಕರಿಗೆ ಮಾಸಾಶನ ನೀಡುತ್ತಾ ಊರುಗೋಲಾಗಿದ್ದು, ಸುಜ್ಞಾನನಿಧಿಯಡಿ ವಿದ್ಯಾರ್ಥಿಗಳಿಗೆ ಶಿಷ್ಯವೇತನ, ರಾಜ್ಯದಲ್ಲಿ ಗ್ರಾಮೀಣ ಭಾಗದಲ್ಲಿ ಇಲ್ಲಿಯವರೆಗೆ 756 ಕೆರೆಗಳ ಪುನಶ್ಚೇತನ ಮಾಡಲಾಗಿದೆ. ಶಿಕ್ಷಕರ ಕೊರತೆ ಎದುರಿಸುತ್ತಿರುವ ಸರ್ಕಾರಿ ಶಾಲೆಗಳಿಗೆ 1025 ಗೌರವ ಶಿಕ್ಷಕರನ್ನು ನೇಮಿಸಲಾಗಿದೆ.
ಇನ್ನೂ ದೇವಸ್ಥಾನ ಜೀರ್ಣೋದ್ದಾರ, ಹಾಲು ಉತ್ಪನ್ನ, ಸಿರಿದಾನ್ಯಗಳ ಆಹಾರ ಉತ್ಪನ್ನ, ರೈತ ಅಧ್ಯಯನ ಪ್ರವಾಸದಂತಹ ಹಲವಾರು ಜನಕಲ್ಯಾಣ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು ಮಹಿಳೆಯರು ಸದುಪಯೋಗ ಪಡೆಯಬೇಕೆಂದರು.
ಸಿಂಧನೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕಿ ಕುಮಾರಿ ಎನ್.ಮಂಜುಳ ಅವರು ತಮ್ಮ ಸಂಪನ್ಮೂಲ ಉಪನ್ಯಾಸದಲ್ಲಿ ಇಂದು ಪ್ರತಿಯೊಂದು ಕಾರ್ಯಕ್ಕೂ ಬಂಡವಾಳ ಅತ್ಯವಶ್ಯಕವಿದ್ದು, ಬಂಡವಾಳ ಸಂಗ್ರಹಣೆಗೆ ಉಳಿತಾಯದ ಯೋಜನೆಗಳು ಅತಿ ಮುಖ್ಯವಾಗಿರುತ್ತವೆ.
ಇಂದಿನ ಅಲ್ಪ ಪ್ರಮಾಣದ ಹೂಡಿಕೆ, ಮುಂದಿನ ಬೃಹತ್ ಬಂಡವಾಳದ ದಾರಿಯಾಗುತ್ತಿದ್ದು, ಮಹಿಳೆಯರು ಆರ್ಥಿಕವಾಗಿ ಸಬಲರಾಗಬೇಕು. ಆಗ ಮಾತ್ರ ಕುಟುಂಬದ ನಿರ್ವಹಣೆಯಲ್ಲಿ ಪುರುಷರಿಗೆ ಬೆಂಬಲ ನೀಡಬಹುದಾಗಿದೆಂದರು.
ಇದೇ ವೇಳೆ ತಾಲೂಕು ಯೋಜನಾಧಿಕಾರಿ ಸುಧೀರ್ ಹಂಗಳೂರು, ಕೃಷಿ ವಲಯ ಮೇಲ್ವಿಚಾರಕ ಪ್ರಭು ಹಿರೇಮಠ್, ಬಾಲಕಿಯರ ನಿಲಯ ಮೇಲ್ವಿಚಾರಕಿ ಅಮರೇಶ್ವರಿ, ಮಹಿಳಾ ಸಾಂತ್ವಾನ ಕೇಂದ್ರದ ಆಪ್ತ ಸಮಾಲೋಚಕಿ ಕುಮಾರಿ ಸರಸ್ವತಿ, ವಕೀಲರಾದ ವೆಂಕಟೇಶ್ ನಾಯ್ಕ್, ಅಶ್ವಿನಿ, ಹೆಡ್ ಕಾನ್ಸ್ಟೇಬಲ್ ನಾಗರತ್ನ ಹಾಗೂ ಜ್ಞಾನವಿಕಾಸ ಸಮನ್ವಯಾಧಿಕಾರಿ, ಮೇಲ್ವಿಚಾರಕರು, ಒಕ್ಕೂಟದ ಸದಸ್ಯರು ಇದ್ದರು.
ವರದಿ : ಶ್ರೀನಿವಾಸ ನಾಯ್ಕ