ಚೆನ್ನೈ: ಐತಿಹಾಸಿಕ ಬೆಳವಣಿಗೆಯೊಂದರಲ್ಲಿ 2020 ರಿಂದ ತಮಿಳುನಾಡು ವಿಧಾನಸಭೆಯು ಅಂಗೀಕರಿಸಿದ ಕನಿಷ್ಠ 10 ಮಸೂದೆಗಳಿಗೆ ರಾಜ್ಯಪಾಲ ಆರ್.ಎನ್. ರವಿ ಅವರು ಒಪ್ಪಿಗೆ ನಿರಾಕರಿಸಿದ್ದರು. ಆದರೆ ಇದೀಗ ಅಧಿಕೃತವಾಗಿ ಕಾನೂನುಗಳಾಗಿ ಮಾರ್ಪಟ್ಟಿವೆ.
ತಮಿಳುನಾಡು ವಿಧಾನಸಭೆಯಲ್ಲಿ ಒಪ್ಪಿಗೆಯಾದ 10 ಮಸೂದೆಗಳನ್ನು ರಾಜ್ಯಪಾಲರು ಅಥವಾ ರಾಷ್ಟ್ರಪತಿಗಳ ಅನುಮೋದನೆಯಿಲ್ಲದೇ ಕಾನೂನಿನ ರೂಪ ಪಡೆದಿವೆ ಎಂದು ಸುಪ್ರೀಂ ಕೋರ್ಟ್‌ನ ಐತಿಹಾಸಿಕ ತೀರ್ಪು ಘೋಷಿಸಿದೆ.
ಈ ತೀರ್ಪಿನ ಮೂಲಕ ಡಿಎಂಕೆ ನೇತೃತ್ವದ ರಾಜ್ಯ ಸರ್ಕಾರಕ್ಕೆ ಭಾರೀ ಗೆಲುವು ಸಿಕ್ಕಂತಾಗಿದ್ದು, ರಾಜ್ಯಪಾಲ ಆರ್ ಎನ್ ರವಿ ಅವರೊಂದಿಗಿನ ದೀರ್ಘಕಾಲದ ಗೊಂದಲಕ್ಕೆ ಈಗ ಸುಪ್ರೀಂ ತೆರೆ ಎಳೆದಿದೆ.
ಈ ವಾರದ ಆರಂಭದಲ್ಲಿ, ತಮಿಳುನಾಡು ರಾಜ್ಯಪಾಲರನ್ನು ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿತು. 10 ಪ್ರಮುಖ ಮಸೂದೆಗಳಿಗೆ ಒಪ್ಪಿಗೆ ನೀಡುವುದನ್ನು ತಡೆಹಿಡಿಯುವ ನಿರ್ಧಾರವು ಕಾನೂನುಬಾಹಿರ ಎಂದು ಹೇಳಿತ್ತು.
ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದಿವಾಲಾ ಮತ್ತು ಆರ್. ಮಹಾದೇವನ್ ಅವರನ್ನೊಳಗೊಂಡ ಪೀಠವು, ರಾಜ್ಯಪಾಲರು ಒಪ್ಪಿಗೆ ನೀಡದೆ ರಾಷ್ಟ್ರಪತಿಗಳಿಗೆ ಮಸೂದೆಗಳನ್ನು ಕಾಯ್ದಿರಿಸಲು ಸಾಧ್ಯವಿಲ್ಲ, ಅದನ್ನು ಪಕ್ಕಕ್ಕೆ ಹಾಕಬೇಕು ಎಂದು ಹೇಳಿತ್ತು.
ರಾಜ್ಯಪಾಲರು 10 ಮಸೂದೆಗಳನ್ನು ರಾಷ್ಟ್ರಪತಿಗಳ ಅನುಮೋದನೆಗೆ ಕಳುಹಿಸಿದ್ದು ಕಾನೂನುಬಾಹಿರವಾಗಿದ್ದು, ಇದನ್ನು ರದ್ದುಗೊಳಿಸಬೇಕು ಎಂದು ನ್ಯಾಯಾಲಯ ತೀರ್ಪು ನೀಡಿತು.
ವಿಧಾನಸಭೆಯು ಮಸೂದೆಯನ್ನು ಯಾವುದೇ ಪ್ರಮುಖ ಬದಲಾವಣೆಗಳಿಲ್ಲದೇ ಮತ್ತೆ ಅಂಗೀಕರಿಸಿದರೆ, ರಾಜ್ಯಪಾಲರು ಅದನ್ನು ತಡೆಹಿಡಿಯಲು ಅಥವಾ ವಿಳಂಬಗೊಳಿಸಲು ಸಾಧ್ಯವಿಲ್ಲ ಎಂದು ಕೋರ್ಟ್ ಒತ್ತಿ ಹೇಳಿತು.