ಕಲಘಟಗಿ: ತಾಲೂಕಿನ ದಾಸ್ತಿಕೊಪ್ಪ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ-63ರಲ್ಲಿ ಗುರುವಾರ ರಾತ್ರಿ ರಸ್ತೆ ಡಿವೈಡರ್‌ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಶಿಕ್ಷಕರೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ತಾಲೂಕಿನ ಗಳಗಿ-ಹುಲಕೊಪ್ಪ ಗ್ರಾಮದ ಶಿವರಾಜದೇವಿ ಪ್ರೌಢಶಾಲೆಯ ಗಣಿತ ಶಿಕ್ಷಕ ಸದಾಶಿವ ವಿರುಪಾಕ್ಷಪ್ಪ ಬೂದಿಹಾಳ (38) ಮೃತ ಶಿಕ್ಷಕರು. ‘ಮೂಲತಃ ಕುಂದಗೋಳ ತಾಲೂಕಿನ ಗುಡಗೇರಿ ಗ್ರಾಮದ ಸದಾಶಿವ ಅವರು ಕಲಘಟಗಿ ಪಟ್ಟಣದ ಹೌಸಿಂಗ್ ಬೋರ್ಡ್ ಕಾಲೊನಿಯಲ್ಲಿ ವಾಸವಾಗಿದ್ದರು. ಗುರುವಾರ ರಾತ್ರಿ ಹುಬ್ಬಳ್ಳಿಯಿಂದ ಮರಳಿ ಕಲಘಟಗಿಯ ಮನೆಗೆ ಬರುತ್ತಿದ್ದಾಗ ರಸ್ತೆ ವಿಭಜಕಕ್ಕೆ ಕಾರು ಡಿಕ್ಕಿಹೊಡೆದಿದೆ. ಮೃತರಿಗೆ ತಂದೆ-ತಾಯಿ, ಪತ್ನಿ, ಪುತ್ರಿ, ಪುತ್ರ ಇದ್ದಾರೆ. ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಿ : ಶಶಿಕುಮಾರ ಕಲಘಟಗಿ