ಧಾರವಾಡ: ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಮುಂಚಿತವಾಗಿಯೇ ಪ್ರಶ್ನೆಪತ್ರಿಕೆ ನೀಡುವ ಆಮಿಷವೊಡ್ಡಿ ವಿದ್ಯಾರ್ಥಿಯಿಂದ 8 ತೊಲೆ ಚಿನ್ನಾಭರಣ ಪಡೆದ ಆರೋಪದಡಿ ನಗರದ ವಿದ್ಯಾರಣ್ಯ ಶಾಲೆಯ ಶಿಕ್ಷಕ ರಾಜಶೇಖರ ವಡತೇರ ಅವರನ್ನು ಅಮಾನತು ಮಾಡಲಾಗಿದೆ.
ಈ ಘಟನೆ ಬೆಳಕಿಗೆ ಬಂದ ಬಳಿಕ ಡಿಡಿಪಿಐ ಎಸ್.ಎಸ್.ಕೆಳದಿಮಠ ಅವರು ಕೆ.ಇ. ಬೋರ್ಡ್ ಸಂಸ್ಥೆಗೆ ನೋಟಿಸ್ ಜಾರಿ ಮಾಡಿದ್ದರು.ಅನುದಾನಿತ ಶಾಲೆಯಾಗಿರುವುದರಿಂದ ಸಂಸ್ಥೆಯು ಶಿಸ್ತುಕ್ರಮ ಜರುಗಿಸಿ, ವರದಿ ನೀಡುವಂತೆ ನೋಟಿಸ್ನಲ್ಲಿ ಸೂಚಿಸಲಾಗಿತ್ತು.
ಫೆ.27ರಂದು ಕೆ.ಇ. ಬೋರ್ಡ್ ಕಾರ್ಯಕಾರಿ ಮಂಡಳಿ ಸದಸ್ಯರ ಸಭೆ ನಡೆದಿದ್ದು, ಸಭೆಯಲ್ಲಿ ನಿರ್ಣಯಿಸಿದಂತೆ ಶಿಕ್ಷಕ ರಾಜಶೇಖರ ವಡತೇರ ಅವರನ್ನು ಫೆ.28ರಿಂದ ಅನ್ವಯವಾಗುವಂತೆ ಸೇವೆಯಿಂದ ಅಮಾನತುಗೊಳಿಸಿ ಇಲಾಖಾ ವಿಚಾರಣೆ ನಡೆಸುವಂತೆ ಆದೇಶಿಸಲಾಗಿದೆ.
ಶಿಕ್ಷಕನಿಗೆ ಚಿನ್ನಾಭರಣ ಕೊಟ್ಟಿರುವುದಾಗಿ ವಿದ್ಯಾರ್ಥಿಯು ಪಾಲಕರಿಗೆ ತಿಳಿಸಿದ ನಂತರ ಶಿಕ್ಷಕ ಜೀವ ಬೆದರಿಕೆ ಹಾಕಿರುವ ಆರೋಪ ಕೇಳಿಬಂದಿತ್ತು. ಇದಲ್ಲದೆ, ವಿದ್ಯಾರ್ಥಿ ಮನೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರಿಂದ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು.
ಘಟನೆ ಕುರಿತು ಪಾಲಕರು ಉಪನಗರ ಠಾಣೆಗೆ ಹೋದಾಗ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡಿರಲಿಲ್ಲ. ಪೊಲೀಸ್ ಆಯುಕ್ತ ಎನ್.ಶಶಿಕುಮಾರ ಅವರಿಗೆ ಮೊರೆ ಹೋದ ಬಳಿಕ ಪ್ರಕರಣ ದಾಖಲಾಗಿತ್ತು.




