ಚೇಳೂರು:ಭಾರತಕ್ಕೆ ಸ್ವಾತಂತ್ರ್ಯ ದೊರಕಿದರೂ, ಪ್ರತಿಯೊಬ್ಬ ನಾಗರಿಕರಿಗೂ ಸಮಾನ ಹಕ್ಕುಗಳನ್ನು ಖಚಿತಪಡಿಸಿದ ಸಂವಿಧಾನ ದೊರೆತಾಗಲೇ ದೇಶಕ್ಕೆ ಸಂಪೂರ್ಣ ಸ್ವಾತಂತ್ರ್ಯ ಸಿಕ್ಕಂತಾಯಿತು ಎಂದು ತಹಸೀಲ್ದಾರ್ ಶ್ವೇತಾ ಬಿ.ಕೆ. ಅಭಿಪ್ರಾಯಪಟ್ಟರು.
ಪಟ್ಟಣದ ಕೆಪಿಎಸ್ ಶಾಲಾ ಆವರಣದಲ್ಲಿ ಬುಧವಾರ ನಡೆದ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಈ ಸಂದರ್ಭದಲ್ಲಿ ತಹಸೀಲ್ದಾರ್ ಶ್ವೇತಾ ಬಿ.ಕೆ. ಸೇರಿದಂತೆ ಮುಖ್ಯ ಗಣ್ಯರು ಡಾ. ಬಿ.ಆರ್. ಅಂಬೇಡ್ಕರ್ ಅವರ ಮತ್ತು ಸಂವಿಧಾನದ ಪೀಠಿಕೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ, ಜ್ಯೋತಿ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ವೇಳೆ ಎಲ್ಲರಿಗೂ ಸಂವಿಧಾನದ ಪೀಠಿಕೆಯನ್ನು ಬೋಧಿಸಲಾಯಿತು.
ಮಾತನಾಡಿದ ತಹಸೀಲ್ದಾರ್ ಅವರು, ಸಂವಿಧಾನವು ಅರ್ಥಪೂರ್ಣವಾಗಿದ್ದು, ಪ್ರತಿಯೊಬ್ಬ ನಾಗರಿಕರಿಗೂ ಸಮಾನ ಹಕ್ಕು ಮತ್ತು ಘನತೆಯನ್ನು ಒದಗಿಸಿದೆ. ಡಾ. ಬಿ.ಆರ್. ಅಂಬೇಡ್ಕರ್ ಅವರು ನೀಡಿದ ಈ ಅಮೂಲ್ಯ ಕೊಡುಗೆಯನ್ನು ಪ್ರತಿಯೊಬ್ಬರೂ ಗೌರವಿಸಿ, ಅದರ ಆಶಯಗಳನ್ನು ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ನಂತರ ಸಂವಿಧಾನದ ಪ್ರಾಸ್ತಾವಿಕ ನುಡಿಯನ್ನು ಆಡಿದ ಪಿಎಸ್‌ಐ ಹರೀಶ್ ಅವರು, ಹನ್ನೊಂದನೇ ಸಂವಿಧಾನ ದಿನಾಚರಣೆಯನ್ನು ಆಚರಿಸುತ್ತಿದ್ದು, ದೇಶದ ಪ್ರತಿಯೊಬ್ಬ ನಾಗರಿಕರಿಗೂ ಸಂವಿಧಾನದ ಆಶಯಗಳು ತಲುಪಲಿ ಎಂಬ ಉದ್ದೇಶದಿಂದ ಈ ಆಚರಣೆ ನಡೆಸಲಾಗುತ್ತಿದೆ ಎಂದರು. ಸಂವಿಧಾನ ರಚನಾ ಸಮಿತಿ ಹಾಗೂ ಅದರ ರಚನೆಯ ಕುರಿತು ಸಂಪೂರ್ಣ ಮಾಹಿತಿ ನೀಡಿದರು.
ಕ.ದ.ಸಂ.ಸ. ಜಿಲ್ಲಾ ಸಂಚಾಲಕ ಕಡ್ಡಿಲು ವೆಂಕಟರವಣಪ್ಪ ಮಾತನಾಡಿ, ಡಾ. ಬಿ.ಆರ್. ಅಂಬೇಡ್ಕರ್ ಅವರು ಹಗಲಿರುಳು ದುಡಿದು ಸಂವಿಧಾನ ಎಂಬ ಮಹಾಗ್ರಂಥವನ್ನು ನೀಡಿದ್ದಾರೆ. ದೇಶದ ಪ್ರಧಾನಿಯಿಂದ ಹಿಡಿದು ಯಾರೇ ಆಗಲಿ ಸಂವಿಧಾನದ ಅಡಿಯಲ್ಲಿ ಅಧಿಕಾರವನ್ನು ನಿರ್ವಹಿಸುತ್ತಿದ್ದಾರೆ. ಮಹಿಳೆಯರಿಗಾಗಿ ವಿಶೇಷ ಸ್ವಾತಂತ್ರ್ಯ ನೀಡಿದ ಸಂವಿಧಾನದ ಆಶಯವನ್ನು ಪ್ರತಿಯೊಬ್ಬರೂ ಎತ್ತಿ ಹಿಡಿಯಬೇಕು ಎಂದರು.
ಗ್ಯಾರಂಟಿ ಸಮಿತಿಯ ಜಿಲ್ಲಾ ಸದಸ್ಯ ಪಿ.ಎನ್. ರಾಧಾಕೃಷ್ಣ ಮಾತನಾಡಿ, ಸಂವಿಧಾನ ಜಾರಿಗೆ ಬರುವ ಮುನ್ನ ದೇಶದಲ್ಲಿ ಅಸ್ಪೃಶ್ಯತೆ ಮತ್ತು ಗುಲಾಮಗಿರಿ ಜಾರಿಯಲ್ಲಿತ್ತು. ಪ್ರತಿಯೊಬ್ಬರೂ ತಲೆ ಎತ್ತಿ ಬದುಕುವ ಹಕ್ಕನ್ನು ಹಾಗೂ ಪ್ರಶ್ನಿಸುವ ಶಕ್ತಿಯನ್ನು ಅಂಬೇಡ್ಕರ್ ಅವರ ಸಂವಿಧಾನ ನೀಡಿದೆ. ಸಂವಿಧಾನ ಗ್ರಂಥವು ಪ್ರತಿಯೊಬ್ಬರಿಗೂ ಗೌರವ ತಂದುಕೊಟ್ಟಿದ್ದು, ಇದು ಪ್ರತಿಯೊಬ್ಬರ ಮನೆಯಲ್ಲಿ ಇರಬೇಕಾದ ಪವಿತ್ರ ಗ್ರಂಥವಾಗಿದೆ ಎಂದರು.
ರಕ್ಷಣಾ ವೇದಿಕೆಯ ಕೆ.ಜಿ. ವೆಂಕಟರವಣಪ್ಪ ಅವರು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಂವಿಧಾನ ಜಾರಿ ದಿನದ ಮಹತ್ವ ತಿಳಿಸುವ ಪ್ರಯತ್ನಕ್ಕೆ ಧನ್ಯವಾದ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಪದವಿ ಶಿಕ್ಷಕ ಅಮರನಾಥ್ ಅವರು ಭಾಗವಹಿಸಿದ್ದರು. ನಂತರ, ಕಲಾವಿದ ಗೋಪಿನಾಯಕ್ ರವರಿಂದ ಡಾ. ಅಂಬೇಡ್ಕರ್ ಕುರಿತು ಕ್ರಾಂತಿ ಗೀತೆಗಳನ್ನು ಹಾಡಲಾಯಿತು.
ಇದಕ್ಕೂ ಮುನ್ನ, ಪಟ್ಟಣದ ವಿವಿಧ ಶಾಲಾ ವಿದ್ಯಾರ್ಥಿಗಳು ಸಂವಿಧಾನದ ಮೂಲಭೂತ ಹಕ್ಕುಗಳ ಬಿತ್ತಿಪತ್ರಗಳನ್ನು ಹಿಡಿದು,ಜೈ ಭೀಮ್ ಘೋಷಣೆಗಳೊಂದಿಗೆ ಕೆಪಿಎಸ್ ಶಾಲೆಯಿಂದ ಮುಖ್ಯ ಎಂ.ಜಿ. ವೃತ್ತ, ಮಸೀದಿ ವರೆಗೆ ಹಾಗೂ ಪೊಲೀಸ್ ವೃತ್ತ ನಿರೀಕ್ಷಕರ ಕಚೇರಿ ವರೆಗೆ ಮೆರವಣಿಗೆ ನಡೆಸಿ, ಶಾಲಾ ಆವರಣದ ವೇದಿಕೆಗೆ ಮರಳಿದರು.
ಈ ಸಂದರ್ಭದಲ್ಲಿ ಆರ್.ಐ. ಈಶ್ವರ್, ಶಿರಸ್ತೇದಾರ ಸತೀಶ್, ಗ್ರಾ.ಪಂ. ಅಧ್ಯಕ್ಷೆ ಕೌಸ್ತರ್, ಉಪಾಧ್ಯಕ್ಷ ಪೈಂಟರ್ ರಾಮು, ಕ.ದ.ಸಂ.ಸ. ಜಿಲ್ಲಾ ಸಂಚಾಲಕ ಕಡ್ಡಿಲು ವೆಂಕಟರವಣಪ್ಪ, ಕ.ರ.ವೆ ಅಧ್ಯಕ್ಷ ಕೆ.ಜಿ. ವೆಂಕಟರವಣಪ್ಪ, ಜೆ.ಎನ್. ಜಾಲರಿ, ಮೆಕ್ಯಾನಿಕ್ ನಯಾಜ್, ಟೈಲರ್ ಚಂದ್ರ ಸೇರಿದಂತೆ ಸಿಬ್ಬಂದಿ ವರ್ಗದ ಜಗ್ಗು, ಗ್ರಾಮ ಸಹಾಯಕ ಶ್ರೀನಿವಾಸ್ ಮತ್ತಿತರರು ಹಾಜರಿದ್ದರು.
ವರದಿ: ಯಾರಬ್. ಎಂ.




