ಚೇಳೂರು : ತಾಲೂಕು ಕಚೇರಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಗಣರಾಜ್ಯೋತ್ಸವ ಆಚರಣೆಯ ಪೂರ್ವಭಾವಿ ಸಭೆಗೆ ಗೈರಾದ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ತಹಸೀಲ್ದಾರ್ ಶ್ವೇತಾ ಬಿ.ಕೆ. ಕಟ್ಟುನಿಟ್ಟಿನ ನೋಟಿಸ್ ನೀಡುವಂತೆ ಸೂಚಿಸಿ ಎಚ್ಚರಿಕೆ ನೀಡಿದರು.
ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಆಯೋಜಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು
ಯಾವುದೇ ಜಯಂತಿ ಅಥವಾ ರಾಷ್ಟ್ರೀಯ ಹಬ್ಬಗಳನ್ನು ಅರ್ಥಪೂರ್ಣವಾಗಿ ಆಚರಿಸುವುದು ನಮ್ಮೆಲ್ಲರ ಜವಾಬ್ದಾರಿ.
ಗಣರಾಜ್ಯೋತ್ಸವದ ಹಿಂದೆ ಅನೇಕರ ಶ್ರಮ ಮತ್ತು ತ್ಯಾಗವಿದೆ. ಈ ಪವಿತ್ರ ಕಾರ್ಯಕ್ರಮದ ಸಭೆಗೆ ಯಾವುದೇ ಪೂರ್ವಾನುಮತಿ ಇಲ್ಲದೆ ಗೈರಾದ ಅಧಿಕಾರಿಗಳ ನಡವಳಿಕೆ ಸರಿಯಲ್ಲ. ಅಂತಹ ಸಿಬ್ಬಂದಿಗೆ ಕೂಡಲೇ ಕಾರಣ ಕೇಳಿ ನೋಟಿಸ್ ಜಾರಿಗೊಳಿಸಲಾಗುವುದು ಎಂದು ತಿಳಿಸಿದರು.
ಮುಂದುವರಿದು ಮಾತನಾಡಿದ ಅವರು ತಾಲೂಕು ಕಚೇರಿಯಲ್ಲಿ ಧ್ವಜಾರೋಹಣ ಮುಗಿದ ನಂತರ ಬೆಳಿಗ್ಗೆ 7:30ಕ್ಕೆ ಸರ್ಕಲ್‌ನಲ್ಲಿ ಸಭೆ ಸೇರಿ ಪಥಸಂಚಲನ ನಡೆಸಲಾಗುವುದು.ಬಳಿಕ ಕೆಪಿಎಸ್ ಶಾಲಾ ಆವರಣದಲ್ಲಿ ಧ್ವಜಾರೋಹಣ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಈ ನಿಟ್ಟಿನಲ್ಲಿ ಎಲ್ಲಾ ಇಲಾಖೆಗಳು ತಮಗೆ ವಹಿಸಿದ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು ಎಂದರು.
ಸಭೆಯಲ್ಲಿದ್ದ ಕ.ದ.ಸಂ.ಸ ಜಿಲ್ಲಾ ಸಂಚಾಲಕರು ಕಡ್ಡಿಲು ವೆಂಕಟರವಣಪ್ಪ ಮಾತನಾಡಿ ತಾಲೂಕಿನ ಎಲ್ಲಾ ಗ್ರಾಮ ಪಂಚಾಯಿತಿ ಪಿಡಿಒಗಳು ಕಾರ್ಯಕ್ರಮದಲ್ಲಿ ಕಡ್ಡಾಯವಾಗಿ ಭಾಗವಹಿಸಬೇಕು.
ಖಾಸಗಿ ಶಾಲೆಯವರು ಕಾರ್ಯಕ್ರಮಗಳಿಗೆ ಬರುತ್ತಿಲ್ಲ ಎಂಬ ದೂರುಗಳಿವೆ.ಕನಿಷ್ಠ ದೇಶದ ಹಬ್ಬದ ಸಂದರ್ಭದಲ್ಲಾದರೂ ಪ್ರೌಢಶಾಲಾ ವಿದ್ಯಾರ್ಥಿಗಳು ಪಾಲ್ಗೊಳ್ಳುವಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಸಭೆಯಲ್ಲಿ ವೃತ್ತ ನಿರೀಕ್ಷಕ ಶ್ರೀನಿವಾಸ್ ಎಂ., ಪಿಡಿಒ ಗೌಸ್ ಪೀರ್, ಆರ್.ಐ ಈಶ್ವರ್, ವಾರ್ಡನ್ ಮಲ್ಲಯ್ಯ, ಮಂಜುನಾಥ ಬೆಟಗೆರೆ, ಕದಸಂಸ ತಾಲೂಕು ಅಧ್ಯಕ್ಷ ಮಂಜುನಾಥ ಪಿ., ಗಿನ್ನಿ ಶ್ರೀನಿವಾಸ್, ಪಾಳ್ಯಕೆರೆ ಬಾಬು, ಜಲಿಪಿಗಾರಪಲ್ಲಿ ಗ್ರಾಮ ಸಹಾಯಕ ಶ್ರೀನಿವಾಸ್, ವಾಲ್ಮೀಕಿ ಮುಖಂಡ ಶ್ರೀನಿವಾಸ, ಪ್ರಸಾದ್, ಸುರೇಂದ್ರಜಿವಿ, ರಾಮಚಂದ್ರ ಹಾಗೂ ಕಚೇರಿ ಸಿಬ್ಬಂದಿ ಉಪಸ್ಥಿತರಿದ್ದರು.
ವರದಿ : ಯಾರಬ್. ಎಂ.




