ನವದೆಹಲಿ: ಇತ್ತೀಚೆಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ದಂಪತಿ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ ಆಶೀರ್ವಾದ ಪಡೆದಿದ್ದಾರೆ.
ದಂಪತಿಯನ್ನು ಆಶೀರ್ವದಿಸಿ ಮಾತನಾಡಿದ ಮೋದಿಯವರು ಮದುವೆ ಸಮಾರಂಭದ ಫೋಟೋಗಳನ್ನು ಈಗಾಗಲೇ ವೀಕ್ಷಿಸಿರುವುದಾಗಿ ತಿಳಿಸಿದ್ದು, ತುಂಬಾ ಖುಷಿಯನ್ನುಂಟು ಮಾಡಿದೆ ಎಂದು ಸಂಸದ ಸೂರ್ಯ ಅವರು ಸಂತಸ ಹಂಚಿಕೊಂಡಿದ್ದಾರೆ.
ಇದೇ ಸಂದರ್ಭದಲ್ಲಿ ಪ್ರಧಾನಿಯವರಿಗೆ ಸಂಸದರು, ಮಧ್ವಾಚಾರ್ಯ ವಿರಚಿತ 750 ವರ್ಷಗಳ ಹಿಂದಿನ ಸಂರಕ್ಷಿತ ʼಸರ್ವಮೂಲʼ ಗ್ರಂಥವನ್ನು ಉಡುಗೊರೆಯಾಗಿ ನೀಡಿದ್ದಾರೆ. ಅತ್ಯಂತ ಪುರಾತನವಾಗಿರುವ ಈ ಗ್ರಂಥವನ್ನು ನೂತನ ತಂತ್ರಜ್ಞಾನದ ಮೂಲಕ ಸಂರಕ್ಷಿಸಲಾಗಿದ್ದು, ಇವುಗಳು ವಾಟರ್ ಪ್ರೂಫ್, ಫೈರ್ ಪ್ರೂಫ್ ತಂತ್ರಜ್ಞಾನವನ್ನು ಒಳಗೊಂಡಿರುವುದರ ಕುರಿತು ಪ್ರಧಾನಿಯವರಿಗೆ ವಿವರಿಸಿದ್ದಾರೆ.
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಎನ್.ಜಿ.ಓ ತಾರಾ ಪ್ರಕಾಶನದಿಂದ ಈ ಗ್ರಂಥವನ್ನು ಸಂರಕ್ಷಿಸಲಾಗಿದ್ದು, ತಾಳೆಗರಿ ಮತ್ತು ಪುರಾತನ ಹಸ್ತಪ್ರತಿಗಳನ್ನು ಉಳಿಸಿ, ಮುಂದಿನ ಪೀಳಿಗೆಗೆ ತಲುಪಿಸುವ ಕಾರ್ಯದಲ್ಲಿ ಈ ಸಂಸ್ಥೆ ತೊಡಗಿಸಿಕೊಂಡಿದೆ.
ಸಂರಕ್ಷಣಾ ವಿಧಾನವನ್ನು ವಿಧೇಯ ವಿದ್ಯಾರ್ಥಿಯಂತೆ ಕೇಳಿಸಿಕೊಂಡ ಪ್ರಧಾನಿ ಮೋದಿ, ನಮ್ಮ ಪೂರ್ವಜರ ಜ್ಞಾನ, ಸಂಸ್ಕೃತಿ ಉಳಿಸುವಿಕೆ ನಿಟ್ಟಿನಲ್ಲಿ, ಜ್ಞಾನ ಭಾರತಿ ಮಿಶನ್ ಅನ್ನು ಆರಂಭಿಸಲಾಗಿದ್ದು, ಇದಕ್ಕೆ ಬಜೆಟ್ ನಲ್ಲಿ ಅನುದಾನ ಕೂಡ ಒದಗಿಸಿದ್ದು ಶ್ಲಾಘನೀಯ.