ಬೆಂಗಳೂರು : ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ವಿರುದ್ಧ ದಾಖಲಾಗಿದ್ದ ಪೋಕ್ಸೊ ಪ್ರಕರಣ ರದ್ದು ಮತ್ತು ಅದರಲ್ಲಿ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್ ಡಿ.6ಕ್ಕೆ ಮುಂದೂಡಿ ಆದೇಶಿಸಿದೆ.
ನ್ಯಾ.ಎಂ.ನಾಗಪ್ರಸನ್ನ ಅವರ ಏಕಸದಸ್ಯ ಪೀಠವು ಇಂದು ವಿಚಾರಣೆ ನಡೆಸಿದ್ದು, ಸಮಯದ ಕೊರತೆ ಹಿನ್ನೆಲೆಯಲ್ಲಿ ಪ್ರಕರಣದ ವಿಚಾರಣೆಯನ್ನು ಮುಂದೂಡಲಾಗಿದೆ.
ಸಹಾಯ ಕೋರಿ ಮನೆಗೆ ಬಂದಿದ್ದ ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಲಾಗಿರುವ ಆರೋಪದಡಿ ಬೆಂಗಳೂರಿನ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಬಿಎಸ್ವೈ ವಿರುದ್ಧ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣ ರದ್ದು ಕೋರಿ ಯಡಿಯೂರಪ್ಪ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ್ದ ಕೋರ್ಟ್ ಡಿ.3ರಂದು ವಿಚಾರಣೆ ಪೂರ್ಣಗೊಳಿಸಿ ಅಂದೇ ತೀರ್ಪು ಪ್ರಕಟಿಸುವುದಾಗಿ ಈ ಹಿಂದಿನ ವಿಚಾರಣೆ ವೇಳೆ ಹೇಳಿತ್ತು.
ಇನ್ನು ರಾಜ್ಯ ಸರ್ಕಾರದ ಪರ ವಿಶೇಷ ಅಭಿಯೋಜಕ ಪ್ರೊ.ರವಿವರ್ಮ ಕುಮಾರ್ ಅವರು ಈ ಹಿಂದೆ ವಾದಿಸಿ, ಪೋಕ್ಸೊ ಕಾಯ್ದೆಯಡಿ ಸೆಕ್ಷನ್ 75ರಲ್ಲಿ ತಿಳಿಸಿದಂತೆ ಕೇಸ್ ಕುರಿತು ಕಾಗ್ನಿಜೆನ್ಸ್ ಪಡೆದ ಬಳಿಕ 3 ತಿಂಗಳಲ್ಲಿ ಸಾಕ್ಷ್ಯಗಳನ್ನು ದಾಖಲಿಸಿಕೊಳ್ಳಬೇಕು. ವಿಳಂಬವಾದರೆ ಸೂಕ್ತ ಕಾರಣ ಏನು ಅಂತಾ ವಿಶೇಷ ಕೋರ್ಟ್ಗೆ ಒದಗಿಸಬೇಕು.
ಆದ್ರೆ ಕಾಗ್ನಿಜೆನ್ಸ್ ಪಡೆದು ಈಗಾಗಲೇ 6 ತಿಂಗಳು ಕಳೆದಿದರೂ ಈ ಪ್ರಕ್ರಿಯೆ ಆಗಿಲ್ಲ. ಹಿಗಾಗಿ ಅರ್ಜಿದಾರ ಆರೋಪಿಗೆ ಖುದ್ದು ಹಾಜರಾಗುವ ವಿನಾಯಿತಿ ನೀಡಿದ್ದ ಮಧ್ಯಂತರ ಆದೇಶವನ್ನು ತೆರವುಗೊಳಿಸಿ ಎಂದು ಪೀಠಕ್ಕೆ ಮನವಿ ಮಾಡಿದ್ದರು.
ಬಿಎಸ್ವೈ ಪರ ಹಿರಿಯ ವಕೀಲ ಸಿ.ವಿ.ನಾಗೇಶ್ ಅವರು ತಮ್ಮ ವಾದವನ್ನು ಇಂದು (ಡಿ.2) ಪೂರ್ಣಗೊಳಿಸುವುದಾಗಿ ಹೇಳಿದ್ದರು. ಸಮಯದ ಅಭಾಯವದಿಂದ ಸದ್ಯ ಕೋರ್ಟ್ ವಿಚಾರಣೆ ಮುಂದೂಡಿ ಆದೇಶಿಸಿದೆ.