ಕೊಯಮತ್ತೂರು: ಋತುಮತಿಯಾಗಿದ್ದ ಬಾಲಕಿಯೊಬ್ಬಳನ್ನು ಶಾಲೆಯ ಹೊರಗೆ ಕೂರಿಸಿ ಪರೀಕ್ಷೆ ಬರೆಸಿದ ಅಮಾನವೀಯ ಘಟನೆ ತಮಿಳು ನಾಡಿನ ಕೊಯಮತ್ತೂರಿನಲ್ಲಿ ನಡೆದಿದೆ. ಕೊಯಮತ್ತೂರಿನ ಖಾಸಗಿ ಶಾಲೆಯಲ್ಲಿ ನಿನ್ನೆ ಬುಧವಾರ ಎಂಟನೇ ತರಗತಿಯ ಪರಿಶಿಷ್ಟ ಜಾತಿ (SC) ವಿದ್ಯಾರ್ಥಿನಿ ಋತುಮತಿಯಾಗಿದ್ದಳು ಎಂಬ ಕಾರಣಕ್ಕೆ ತರಗತಿಯ ಹೊರಗೆ ಕೂರಿಸಿ ವಾರ್ಷಿಕ ಪರೀಕ್ಷೆ ಬರೆಸಿದ್ದಾರೆ. ತರಗತಿಯ ಹೊರಗೆ ಪರೀಕ್ಷೆ ಬರೆಯುತ್ತಿರುವ ಬಾಲಕಿಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಶಾಲಾ ಆಡಳಿತದ ವಿರುದ್ಧ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.
ಪ್ರೌಢ ಶಿಕ್ಷಣ ಇಲಾಖೆ ನಿರ್ದೇಶಕ ಎ. ಪಳನಿಸಾಮಿ ಅವರನ್ನು ಸಂಪರ್ಕಿಸಿದಾಗ, ಶಿಕ್ಷಣ ಅಧಿಕಾರಿಗಳಿಗೆ ವಿಚಾರಣಾ ವರದಿಯನ್ನು ಸಲ್ಲಿಸಲು ಸೂಚಿಸಲಾಗಿದೆ, ಶಾಲೆಗೆ ಶೋಕಾಸ್ ನೋಟಿಸ್ ನೀಡುವಂತೆ ಕೇಳಲಾಗಿದೆ ತಿಳಿಸಿದ್ದಾರೆ. ಭವಿಷ್ಯದಲ್ಲಿ ಶಾಲೆಗಳಲ್ಲಿ ಇಂತಹ ಘಟನೆಗಳು ನಡೆಯದಂತೆ ತಡೆಯಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಜಿಲ್ಲೆಯ ಎಲ್ಲಾ ಶಾಲೆಗಳಿಗೆ ಸುತ್ತೋಲೆ ಹೊರಡಿಸುವಂತೆ ಕೇಳಲಾಗಿದೆ ಎಂದು ಹೇಳಿದರು.
ಮಗಳು ಕಳೆದ ವಾರ ಋತುಮತಿಯಾದ ನಂತರ ಒಂದು ವಾರ ಶಾಲೆಗೆ ಹೋಗಿರಲಿಲ್ಲ. ಈ ವಾರ ಎರಡು ವಾರ್ಷಿಕ ಪರೀಕ್ಷೆ ಇದ್ದ ಕಾರಣ ಹೋಗಲೇ ಬೇಕಾಗಿತ್ತು. ಪರೀಕ್ಷಾ ಹಾಲ್‌ನಲ್ಲಿ ಬರೆಯಲು ಪ್ರತ್ಯೇಕ ಮೇಜು ಮತ್ತು ಬೆಂಚ್ ವ್ಯವಸ್ಥೆ ಮಾಡಿಕೊಡಿ, ಅವಳಿಗೆ ಆರೋಗ್ಯ ಚೆನ್ನಾಗಿಲ್ಲ ಎಂದು ನಾವು ಕೇಳಿಕೊಂಡಿದ್ದೆವು.
ಸೋಮವಾರ ಸಮಾಜ ವಿಜ್ಞಾನ ಪರೀಕ್ಷೆಯನ್ನು ಬರೆಯಲು ಅವಳು ಶಾಲೆಗೆ ಹೋದಾಗ, ಶಾಲೆಯಲ್ಲಿ ಅವಳಿಗೆ ಪ್ರತ್ಯೇಕವಾಗಿ ಕೂರಲು ವ್ಯವಸ್ಥೆ ಮಾಡಿರಲಿಲ್ಲ. ಬದಲಾಗಿ, ಶಾಲಾ ಆಡಳಿತವು ಅವಳನ್ನು ತರಗತಿಯ ಹೊರಗಿನ ಮೆಟ್ಟಿಲುಗಳ ಮೇಲೆ ಕುಳ್ಳಿರಿಸಿ ಪರೀಕ್ಷೆ ಬರೆಸಿತು. ಅವಳು ಮೆಟ್ಟಿಲುಗಳ ಮೇಲೆ ಕುಳಿತು ಎರಡೂವರೆ ಗಂಟೆಗಳ ಕಾಲ ಪರೀಕ್ಷೆಯನ್ನು ಬರೆಯುತ್ತಿದ್ದಾಗ, ಕಾಲು ನೋವು ಬಂತು.