ಬೆಂಗಳೂರು : ಕರ್ನಾಟಕದ ಬಹು ಚರ್ಚಿತ ಯೋಜನೆ ಬೆಂಗಳೂರು ನಗರದ 2ನೇ ವಿಮಾನ ನಿಲ್ದಾಣ. ವಿಮಾನ ನಿಲ್ದಾಣ ಎಲ್ಲಿ ನಿರ್ಮಾಣವಾಗಲಿದೆ? ಎಂಬುದು ಇನ್ನೂ ಕುತೂಹಲ. ಈಗ ಯೋಜನೆ ಕುರಿತು ಅಪ್‌ಡೇಟ್ ಒಂದು ಸಿಕ್ಕಿದೆ.
ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳು ಮತ್ತು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ್ ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಒಂದನ್ನು ಹಾಕಿದ್ದಾರೆ.
‘ಬೆಂಗಳೂರಿನ ಆಗಸ ಮತ್ತಷ್ಟು ವಿಸ್ತಾರ: ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದತ್ತ ದಿಟ್ಟ ಹೆಜ್ಜೆ!’ ಎಂದು ಹೇಳಿದ್ದಾರೆ.
‘ಬೆಂಗಳೂರು ಸಮೀಪ ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾಪನೆ ಸಂಬಂಧ KSIIDC ಮತ್ತೊಂದು ದಿಟ್ಟ ಹೆಜ್ಜೆ ಯನ್ನು ಇರಿಸಿದೆ. ನಗರದ ಹೊರವಲಯದಲ್ಲಿ ಆಯ್ಕೆ ಮಾಡಲಾದ 3 ಸ್ಥಳಗಳನ್ನು ಎಎಐ (ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ) ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ, ಅನೇಕ ವಿಷಯಗಳ ಕುರಿತು ಪ್ರಸ್ತಾಪ ಮಾಡಿ, ಈ ಸ್ಥಳಗಳಲ್ಲಿರುವ ಸವಾಲುಗಳ ಕುರಿತು ತಿಳಿಸಿದ್ದಾರೆ’ ಎಂದು ಪೋಸ್ಟ್‌ನಲ್ಲಿ ಉಲ್ಲೇಖಿಸಿದ್ದಾರೆ.
‘ಈ ಹಿನ್ನೆಲೆಯಲ್ಲಿ, ವಿವರವಾದ ಕಾರ್ಯತಂತ್ರ ಮತ್ತು ಕಾರ್ಯಸಾಧ್ಯತಾ ವರದಿ ಸಿದ್ಧಪಡಿಸಲು ಟೆಂಡರ್ ಆಹ್ವಾನಿಸಲಾಗಿದೆ. ಈ ಟೆಂಡರ್‌ನಲ್ಲಿ 3-4 ಸಂಸ್ಥೆಗಳು ಭಾಗವಹಿಸಿದ್ದು, ನಿಗದಿತ ಅವಧಿಯೊಳಗೆ ಪ್ರಕ್ರಿಯೆ ಪೂರ್ಣಗೊಳ್ಳಲಿದೆ’ ಎಂದು ಸಚಿವರು ಹೇಳಿದ್ದಾರೆ.
‘ಅವರು ಸಲ್ಲಿಸುವ ವರದಿಯ ಆಧಾರದಲ್ಲಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು. ಪ್ರಸ್ತಾವಿತ ಹೊಸ ವಿಮಾನ ನಿಲ್ದಾಣವು ವೇಗವಾಗಿ ಬೆಳೆಯುತ್ತಿರುವ ಬೆಂಗಳೂರಿನ ವಾಯು ಸಂಚಾರ ಬೇಡಿಕೆಯನ್ನು ಪೂರೈಸಲು ಮತ್ತು ಕರ್ನಾಟಕದ ದೀರ್ಘಕಾಲೀನ ವಾಯುಯಾನ ಮತ್ತು ಆರ್ಥಿಕ ಹಿತಾಸಕ್ತಿಗಳನ್ನು ಭದ್ರಪಡಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ’ ಎಂದು ಸಚಿವರು ಭರವಸೆ ವ್ಯಕ್ತಪಡಿಸಿದ್ದಾರೆ.




