ತುರುವೇಕೆರೆ: ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಸೆಪ್ಟಂಬರ್ 22 ರಂದು ತಾಲ್ಲೂಕು ಮಟ್ಟದ 6 ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ನಡೆಸಲು ತೀರ್ಮಾನಿಸಲಾಗಿದೆ ಹಾಗೂ ಸಮ್ಮೇಳನದ ಅಧ್ಯಕ್ಷರಾಗಿ ಪ್ರೊ.ಸಂಪಿಗೆ ತೋಂಟಾದಾರ್ಯ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ ಎಂದು ತಾಲ್ಲೂಕು ಕಸಾಪ ಅಧ್ಯಕ್ಷ ಡಿ.ಪಿ.ರಾಜು ತಿಳಿಸಿದರು.
ಪಟ್ಟಣದ ಕನ್ನಡ ಭವನದಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ತಾಲ್ಲೂಕಿನಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನವನ್ನು ನಡೆಸಬೇಕೆಂಬ ಆಶಯದಿಂದ ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು, ಹೋಬಳಿ, ನಗರ ಘಟಕಗಳ ಪದಾಧಿಕಾರಿಗಳು ಹಾಗೂ ಆಜೀವ ಸದಸ್ಯರುಗಳೊಡನೆ ಸಭೆ ಸೇರಿ ಚರ್ಚಿಸಲಾಗಿತ್ತು. ತದನಂತರದಲ್ಲಿ ಶಾಸಕ ಎಂ.ಟಿ.ಕೃಷ್ಣಪ್ಪನವರಲ್ಲಿ ವಿಷಯ ಪ್ರಸ್ತಾಪಿಸಿ ಶಾಸಕರೂ ಸಹ ಅಗತ್ಯ ಸಹಕಾರ ನೀಡುವ ಭರವಸೆ ನೀಡಿದ್ದಾರೆ. ಸಮ್ಮೇಳನವು ಶಾಸಕ ಎಂ.ಟಿ.ಕೃಷ್ಣಪ್ಪನವರ ನೇತೃತ್ವದಲ್ಲಿ ಪಟ್ಟಣದ ಶ್ರೀ ಸತ್ಯಗಣಪತಿ ಆಸ್ಥಾನ ಮಂಟಪದಲ್ಲಿ ಅದ್ದೂರಿಯಾಗಿ ನೆರವೇರಲಿದೆ ಎಂದರು.
ಸಮ್ಮೇಳನದ ಸಿದ್ದತೆ ಭರದಿಂದ ನಡೆಯುತ್ತಿದ್ದು, ಸಮ್ಮೇಳನನಾಧ್ಯಕ್ಷರಾಗಿ ತಾಲೂಕಿನ ಹಿರಿಯ ಸಾಹಿತಿ ಪ್ರೊ.ಸಂಪಿಗೆ ತೋಂಟಾದಾರ್ಯ ಅವರನ್ನು ಆಯ್ಕೆ ಮಾಡಲಾಗಿದೆ. ಸಮ್ಮೇಳನದ ಉದ್ಘಾಟನೆಯನ್ನು ಬಂಡಾಯ ಸಾಹಿತಿ ಎಂದೇ ಪ್ರಸಿದ್ದವಾಗಿರುವ ಬರಗೂರು ರಾಮಚಂದ್ರಪ್ಪ ನೆರವೇರಿಸಲಿದ್ದಾರೆ.
ಸಮಾರೋಪ ಸಮಾರಂಭದಲ್ಲಿ ನಟರತ್ನಾಕರ ದಿವಂಗತ ಮಾಸ್ಟರ್ ಹಿರಣ್ಣಯ್ಯ ಅವರ ಪುತ್ರ ಕಿರುತೆರೆ, ಚಲನಚಿತ್ರ ಕಲಾವಿದರಾದ ಬಾಬು ಹಿರಣಯ್ಯ ಸಮಾರೋಪ ನುಡಿಗಳನ್ನಾಡಲಿದ್ದಾರೆ ಎಂದ ಅವರು, ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷರಾಗಿ ಶಾಸಕ ಎಂ.ಟಿ.ಕೃಷ್ಣಪ್ಪ, ಹಣಕಾಸು ಸಮಿತಿ ಅಧ್ಯಕ್ಷರಾಗಿ ಕಸಾಪ ಗೌರವಾಧ್ಯಕ್ಷರಾದ ಟಿ.ಎಸ್.ಬೋರೇಗೌಡರು, ಆಹಾರ ಸಮಿತಿ ಅಧ್ಯಕ್ಷರಾಗಿ ಡಾ.ಚೌದ್ರಿ ನಾಗೇಶ್, ಮೆರವಣಿಗೆ ಸಮಿತಿ ಅಧ್ಯಕ್ಷರಾಗಿ ಅಮಾನಿಕೆರೆ ಮಂಜುನಾಥ್, ವೇದಿಕೆ ಸಮಿತಿ ಅಧ್ಯಕ್ಷರಾಗಿ ಪಪಂ ಮುಖ್ಯಾಧಿಕಾರಿ ಶ್ರೀನಾಥ್ ಬಾಬು, ಸ್ಮರಣ ಸಂಚಿಕೆ ಪ್ರಧಾನ ಸಂಪಾದಕರಾಗಿ ನಿವೃತ್ತ ಪ್ರಾಂಶುಪಾಲ ಮಂಜೇಗೌಡರನ್ನು ನೇಮಕ ಮಾಡಲಾಗಿದೆ. ಇನ್ನುಳಿದಂತೆ ಕಸಾಪ ಪದಾಧಿಕಾರಿಗಳು ಪ್ರತಿಯೊಂದು ಸಮಿತಿಯ ಸಂಚಾಲಕರಾಗಿರುತ್ತಾರೆ. ಸಮ್ಮೇಳನದ ಸ್ಮರಣ ಸಂಚಿಕೆಗೆ ಲೇಖನಗಳನ್ನು ಆಹ್ವಾನಿಸಿದ್ದು, ಆಗಸ್ಟ್ 25 ರೊಳಗೆ ತಾಲೂಕಿನ ಯುವ ಸಾಹಿತಿಗಳು, ನಾಗರೀಕರು ಲೇಖನ ಕಳಿಸಬಹುದಾಗಿದೆ. ಲೇಖನದ ಆಯ್ಕೆ ಸಂಪಾದಕೀಯ ಮಂಡಳಿಯದ್ದಾಗಿದೆ ಎಂದರು.
ಗೋಷ್ಟಿಯಲ್ಲಿ ಕಸಾಪ ಗೌರವಾಧ್ಯಕ್ಷ ಟಿ.ಎಸ್.ಬೋರೇಗೌಡ, ಮಾಯಸಂದ್ರ ಹೋಬಳಿ ಘಟಕದ ಅಧ್ಯಕ್ಷ ಮುನಿರಾಜು, ಕಸಾಪ ಪದಾಧಿಕಾರಿಗಳಾದ ಮಂಜೇಗೌಡ, ದಿನೇಶ್, ಕೆಂಪರಾಜು, ಪರಮೇಶ್ವರಸ್ವಾಮಿ, ಷಣ್ಮುಖಪ್ಪ, ಆನಂದಜಲ, ರಾಘವೇಂದ್ರ, ಬಸವರಾಜು, ನಗರ ಘಟಕದ ಅಧ್ಯಕ್ಷ ನಂಜೇಗೌಡ, ಕಾರ್ಯದರ್ಶಿ ಗಿರೀಶ್ ಕೆ ಭಟ್, ಸಂಘಟನೆಯ ಗಿರೀಶ್, ಚಂದ್ರಕೀರ್ತಿ, ಶಿವಾರಾಧ್ಯ, ಲೋಕೇಶ್ ಮುಂತಾದವರಿದ್ದರು.
ವರದಿ: ಗಿರೀಶ್ ಕೆ ಭಟ್, ತುರುವೇಕೆರೆ




