ಬೆಳಗಾವಿ: ಕಬ್ಬಿನ ಗದ್ದೆಯಲ್ಲಿ ಕಬ್ಬು ಬೆಳೆ ನಡುವೆ ಗಾಂಜಾ ಬೆಳೆದು ಬಂಧನಕ್ಕೀಡಾಗಿದ್ದ ಆರೋಪಿಗೆ ನಾಲ್ಕು ವರ್ಷಗಳ ಜೈಲು ಶಿಕ್ಷೆ ವಿಧಿಸಿ ಬೆಳಗಾವಿ ಜಿಲ್ಲಾ ನ್ಯಾಯಾಲಯ ಆದೇಶ ಹೊರಡಿಸಿದೆ.
ಮಲಗೌಡ ರಾವಜಿಗೌಡ ಪಾಟೀಲ್ ಜೈಲುಶಿಕ್ಷೆಗೆ ಗುರಿಯಾದ ಆರೋಪಿ. ಮಲಗೌಡ ರಾವಜಿಗೌಡ, ಕಬ್ಬಿನ ಗದ್ದೆಯಲ್ಲಿ ಗಾಂಜಾ ಗಿಡಗಳನ್ನು ಬೆಳೆದು ಅವುಗಳನ್ನು ಒಣಗಿಸಿ ಮಾರಾಟ ಮಾಡಲು ಯತ್ನಿಸುತ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದರು.
ಬಂಧಿತನಿಂದ 18 ಕೆ.ಜಿ 500 ಗ್ರಾಂ ಹಸಿ ಗಾಂಜಾ ಗಿಡಗಳು ಮತ್ತು 4 ಕೆ.ಜಿ. 500ಗ್ರಾಂ ಅರ್ಧಮರ್ಧ ಒಣಗಿದ ಗಾಂಜಾ ಗಿಡಗಳನ್ನು ಜಪ್ತಿ ಮಾಡಿದ್ದರು.
ಪ್ರಕರಣ ಸಂಬಂಧ ಬೆಳಗಾವಿ ಸಿಇಎನ್ ಅಪರಾಧ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷ ಸುನೀಲಕುಮಾರ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಗಾಂಜಾ ಪ್ರಕರಣದ ಬಗ್ಗೆ ಬೆಳಗಾವಿಯ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿದ್ದು, ಈ ವೇಳೆ ನ್ಯಾಯಾಲಯ ಆರೋಪಿ ಮಲಗೌಡ ರಾವಜಿಗೌಡ ಪಾಟೀಲ ದೋಷಿ ಎಂದು ತೀರ್ಪು ನೀಡಿದೆ. ಅಲ್ಲದೇ ಅಪರಾಧಿಗೆ 4 ವರ್ಷಗಳ ಕಾಲ ಕಠಿಣ ಕಾರಾಗೃಹ ಶಿಕ್ಷೆ ಮತ್ತು 50,000 ರೂಪಾಯಿ ದಂಡ ವಿಧಿಸಿ ಆದೇಶ ಹೊರಡಿಸಿದೆ.




