ಬೆಂಗಳೂರು: ಗಂಡನ ಕಿರುಕುಳಕ್ಕೆ ಬೇಸತ್ತು ಡಿವೋರ್ಸ್ ಕೊಟ್ಟು ಮಗನೊಂದಿಗೆ ನೆಮ್ಮದಿಯಾಗಿದ್ದ ಮಹಿಳೆಗೆ ಎರಡನೇ ಗಂಡ ಕಿರುಕುಳ ನೀಡಲು ಪ್ರಾರಂಭಿಸಿ, ನಂತರ ಕೊಲೆ ಮಾಡಿರುವ ಘಟನೆ ನೆಲಮಂಗಲದಲ್ಲಿ ನಡೆದಿದೆ.
ನೆಲಮಂಗಲದ ಭಕ್ತನಪಾಳ್ಯ ಸಮೀಪದ ವಿಶ್ವಶಾಂತಿ ನಗರದಲ್ಲಿ ಈ ಘಟನೆ ನಡೆದಿದೆ. ಘಟನೆಯಲ್ಲಿ ಸಲ್ಮಾ (30) ಕೊಲೆಯಾಗಿದೆ. ಹೆಂಡತಿಯ ಕೊಲೆ ಮಾಡಿದ ಇಮ್ರಾನ್ನನ್ನು ಪೊಲೀಸರು ಬಂಧಿಸಿದ್ದಾರೆ.
ಇಬ್ಬರ ವೈವಾಹಿಕ ಜೀವನ ಚೆನ್ನಾಗಿತ್ತು. ಆದ್ರೆ ನಿನ್ನೆ ರಾತ್ರಿ ದಂಪತಿ ನಡುವೆ ಜಗಳ ಶುರುವಾಗಿ ಇಮ್ರಾನ್ ಪತ್ನಿ ಸಲ್ಮಾಳ ಕುತ್ತಿಗೆ ಹಿಸುಕಿ ಕೊಲೆಗೈದಿದ್ದಾನೆ. ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಇಮ್ರಾನ್ ನೆಲಮಂಗಲ ಟೌನ್ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ.
ಕಳೆದ 8 ತಿಂಗಳ ಹಿಂದೆಯಷ್ಟೇ ಇಮ್ರಾನ್ ಸಲ್ಮಾಳನ್ನು ಮದುವೆಯಾಗಿದ್ದ. ಇಬ್ಬರಿಗೂ ಕೂಡ ಇದು ಎರಡನೇ ಮದುವೆ ಆಗಿತ್ತು. ನೆಲಮಂಗಲದ ಬಾಡಿಗೆ ಮನೆಯಲ್ಲಿ ಇಬ್ಬರೂ ಜೀವನ ಆರಂಭಿಸಿದ್ರು. ಸಲ್ಮಾಳಿಗೆ ಈಗಾಗಲೇ ಒಬ್ಬ ಮಗನಿದ್ದ. ಹೀಗಾಗಿ, ಮಗನನ್ನು ನೋಡುವ ವಿಚಾರಕ್ಕೆ ಇಬ್ಬರ ನಡುವೆ ಕಳೆದ ರಾತ್ರಿ ಗಲಾಟೆಯಾಗಿದೆ. ಕೋಪದಲ್ಲಿ ಪತಿ ಇಮ್ರಾನ್ ಪತ್ನಿ ಸಲ್ಮಾಳನ್ನು ಕೊಲೆಗೈದು ಪರಾರಿಯಾಗಿದ್ದಾನೆ ಎಂದು ಸ್ಥಳಕ್ಕೆ ಎಸ್‌ಪಿ ಸಿ ಕೆ ಬಾಬಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.