ಬೆಂಗಳೂರು: ನಗರದ ಆಡುಗೋಡಿಯ ಎಂ.ಆರ್.ನಗರದಲ್ಲಿ ನಡೆದಿರುವ ಪೈಶಾಚಿಕ ಘಟನೆ ಸ್ಥಳೀಯರಲ್ಲಿ ಆಕ್ರೋಶ ಉಂಟುಮಾಡಿದೆ.
ವಿಶೇಷ ಚೇತನ ಯುವತಿಯ ಮೇಲೆ ಕಾಮುಕ ವಿಘ್ನೇಶ್ ಅಲಿಯಾಸ್ ದಾಡು ಎಂಬಾತ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಮಾತು ಬಾರದ ಹಾಗೆಯೇ ಕಾಲು ಸಹ ಸಂಪೂರ್ಣವಾಗಿ ಸ್ವಾದೀನವಿಲ್ಲದ ಯುವತಿ, ಇನ್ನೂ ಮಗುವಿನಂತೆ ಬದುಕುತ್ತಿದ್ದಾಳೆ.
ನವೆಂಬರ್ 9 ರಂದು ಕುಟುಂಬಸ್ಥರು ಮದುವೆಗೆ ತೆರಳಿದ್ದ ವೇಳೆ ಈ ಘಟನೆ ನಡೆದಿದೆ. ಅವರು ಹೊರಗಿನಿಂದ ಚಿಲಕ ಹಾಕಿ ಯುವತಿಯನ್ನು ಮನೆಯಲ್ಲಿ ಬಿಟ್ಟು ತೆರಳಿದ್ದರು.
ಬೆಳಗ್ಗೆ 11 ಗಂಟೆಯ ಸುಮಾರಿಗೆ ಗಾಂಜಾ ನಶೆಯಲ್ಲಿದ್ದ ವಿಘ್ನೇಶ್ ಮನೆಗೆ ಬಂದು ಚಿಲಕ ತೆಗೆದು ಒಳಗೆ ನುಗ್ಗಿದ್ದಾನೆ. ಈ ವೇಳೆ ಯುವತಿಯ ತಾಯಿ ಮನೆಗೆ ಬಂದು ಒಳಗಿನಿಂದ ಚಿಲಕ ಹಾಕಿರುವುದನ್ನು ಗಮನಿಸಿ ಬಾಗಿಲು ಒಡೆದು ಒಳಗೆ ನುಗ್ಗಿದಾಗ, ಮಗಳ ದೇಹದ ಮೇಲೆ ಬಟ್ಟೆ ಇಲ್ಲದ ಸ್ಥಿತಿಯಲ್ಲಿ ಕಂಡು ಬೆಚ್ಚಿಬಿದ್ದಿದ್ದಾಳೆ.
ಅಲ್ಲಿ ಅವಿತು ಕುಳಿತಿದ್ದ ವಿಘ್ನೇಶ್ ತಾಯಿಯನ್ನು ಕಂಡು ಒಳ ಉಡುಪು ಧರಿಸಿ ಸ್ಥಳದಿಂದ ಪರಾರಿಯಾಗಲು ಯತ್ನಿಸಿದರೂ ಸ್ಥಳೀಯರು ಆತನನ್ನು ಹಿಡಿದು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಆಡುಗೋಡಿ ಪೊಲೀಸರು ಪ್ರಕರಣ ದಾಖಲಿಸಿ ಆರೋಪಿ ವಿಘ್ನೇಶ್ ಬಂಧಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಪ್ರದೇಶದ ಜನರು ಆಕ್ರೋಶ ವ್ಯಕ್ತಪಡಿಸಿದ್ದು, “ಇವತ್ತು ಆ ಯುವತಿಯ ಮೇಲೆ ಕೃತ್ಯ ಮಾಡಿದ್ದಾನೆ, ನಾಳೆ ನಮ್ಮ ಮನೆಯ ಮಕ್ಕಳ ಮೇಲೆ ಇದೇ ರೀತಿ ಮಾಡುವವನು. ಕಠಿಣ ಶಿಕ್ಷೆ ಕೊಡಬೇಕು,” ಎಂದು ಆಗ್ರಹ ವ್ಯಕ್ತಪಡಿಸಿದ್ದಾರೆ.




