ಸಿರುಗುಪ್ಪ : –ಮಲೆನಾಡ ಭಾಗದಲ್ಲಿ ಮೈದುಂಬಿ ಹರಿಯುತ್ತಿರುವ ತುಂಗಾ ಮತ್ತು ಭದ್ರಾ ನದಿಗಳ ನೀರಿಂದ ತುಂಗಾಭದ್ರ ಜಲಾಶಯ ಭರ್ತಿಯಾಗಿ ನದಿಗೆ ನೀರು ಹರಿಬಿಟ್ಟಿರುವ ಹಿನ್ನಲೆಯಲ್ಲಿ ತಾಲೂಕಿನ ಕೆಂಚನಗುಡ್ಡ ಗ್ರಾಮದಲ್ಲಿರುವ ಐತಿಹಾಸಿಕ ವಿಜಯನಗರ ಅಣೆಕಟ್ಟೆಗೆ ಜಲಪಾತದ ಕಳೆ ಮರುಕಳಿಸಿದೆ.
ದೇಶನೂರು, ಸಿರುಗುಪ್ಪ, ಇಬ್ರಾಹಿಂಪುರ ಗ್ರಾಮಗಳಿಗೆ ನೀರು ಹಾಯಿಸುವ ಉದ್ದೇಶದಿಂದ ಅಂದಿನ ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ಹರಿಯುವ ನದಿಗೆ ಅಡ್ಡಲಾಗಿ ಅಣೆಕಟ್ಟು ಕಟ್ಟಲಾಗಿದೆ.
ನದಿಯ ದಂಡೆಯಲ್ಲಿರುವ ವಸುದೇಂದ್ರ ತೀರ್ಥರ ಬೃಂದಾವನ, ಐತಿಹಾಸಿಕ ಗಂಗಾಧರೇಶ್ವರ ದೇವಸ್ಥಾನವು ಇಲ್ಲಿನ ಪ್ರಸಿದ್ದ ಧಾರ್ಮಿಕ ಕೇಂದ್ರಗಳಾಗಿವೆ. ಪ್ರತಿ ಮಳೆಗಾಲದಲ್ಲೂ ಜಲಪಾತದಂತೆ ಹರಿಯುವ ಮನೋಹರ ದೃಶ್ಯವು ಪ್ರವಾಸಿಗರನ್ನು ಆಕರ್ಷಿಸುತ್ತಿದೆ.
ಆದರೆ ಯಾವುದೇ ಸೂಚನಾ ಫಲಕಗಳನ್ನಾಗಲೀ ಅಳವಡಿಸದಿರುವುದು ಪ್ರವಾಸಿಗರಿಗೆ ಬೇಸರ ಮೂಡಿಸಿದೆ.
ಕಳೆದ ವರ್ಷ ಮಳೆಯ ಕೊರತೆಯಿಂದಾಗಿ ಬತ್ತಿಹೋಗಿದ್ದ ನದಿಯಲ್ಲಿ ಮತ್ತು ಕಾಲುವೆ ಮೂಲಕ ನೀರು ಹರಿಯುತ್ತಿದ್ದು, ಬೆಳೆಯಿಲ್ಲದೇ ಕಂಗಾಲಾಗಿದ್ದ ರೈತರಿಗೆ ಸಂತಸವನ್ನು ಉಂಟು ಮಾಡಿದೆ.ಭತ್ತದ ನಾಟಿ ಕಾರ್ಯ ಬಿರುಸಾಗಿ ನಡೆದಿರುವುದರಿಂದ ಕೃಷಿ ಕಾರ್ಮಿಕರಿಗೆ ದುಡಿಮೆಯನ್ನು ಹೆಚ್ಚಿಸಿದೆ.
ತುಂಗಾಭದ್ರ ಜಲಾಶಯವು ಗರಿಷ್ಟ ಮಟ್ಟಕ್ಕೆ ತಲುಪಿದ್ದು, ಯಾವುದೇ ಕ್ಷಣದಲ್ಲಾದರೂ ನದಿಗೆ ಹೆಚ್ಚಿನ ನೀರು ಹರಿಸುವ ಸಾಧ್ಯತೆಯಿದ್ದು, ಪ್ರವಾಹಕ್ಕೆ ತುತ್ತಾಗುವ ಗ್ರಾಮಗಳ ಜನ ಜಾನುವಾರುಗಳ ರಕ್ಷಣೆ, ನದಿಯ ಮದ್ಯದಲ್ಲಿರುವ ಜಮೀನುಗಳಿಗೆ ತೆರಳದಂತೆ ರೈತರಿಗೆ ಆಯಾ ಗ್ರಾಮಗಳಲ್ಲಿ ಡಂಗೂರ ಸಾರುವುದು ಅಥವಾ ಪಂಚಾಯಿತಿ ಕಸದ ವಾಹನಗಳ ಧ್ವನಿ ಮುದ್ರಿಕೆಯಿಂದ ಜಿಲ್ಲಾ ಮತ್ತು ತಾಲೂಕಾಡಳಿತದಿಂದ ಎಚ್ಚರಿಕೆಯನ್ನು ನೀಡಬೇಕಾಗಿದೆ.
ವರದಿ:- ಶ್ರೀನಿವಾಸ ನಾಯ್ಕ