ನಂಜನಗೂಡು: ಜಗತ್ತಲ್ಲಿ ನಾನಾ ರೀತಿಯ ವಿಸ್ಮಯಗಳು ನಡೆಯುತ್ತಿವೆ. ಇದೀಗ ಎರಡು ತಲೆ, ನಾಲ್ಕು ಕಣ್ಣು, ಎರಡು ಬಾಯಿ ಇರುವ ವಿಚಿತ್ರ ಮೇಕೆ ಮರಿ ಜನನವಾಗಿದೆ.
ನಂಜನಗೂಡು ತಾಲ್ಲೂಕಿನ ಕುರಹಟ್ಟಿ ಗ್ರಾಮದಲ್ಲಿ ಘಟನೆ ನಡೆದಿದ್ದು,ಕುರಹಟ್ಟಿ ಗ್ರಾಮದ ರೈತ ರವೀಶ್ ಎಂಬುವರಿಗೆ ಸೇರಿದ ಮೇಕೆ ಇದಾಗಿದೆ.ರವೀಶ್ ಮನೆಯಲ್ಲಿ ವಿಚಿತ್ರ ಮರಿಗೆ ಜನ್ಮ ನೀಡಿರುವ ಮೇಕೆ ಇದೀಗ ಗ್ರಾಮದ ಚರ್ಚಾವಸ್ತುವಾಗಿದೆ.
ಎರಡು ಮರಿಗಳಿಗೆ ಜನ್ಮ ನೀಡಿರುವ ತಾಯಿ ಮೇಕೆ ಎಲ್ಲರ ಅಚ್ಚರಿಗೆ ಕಾರಣವಾಗಿದೆ. ಒಂದು ಮರಿಗೆ ಎರಡು ತಲೆ, ನಾಲ್ಕು ಕಣ್ಣು, ಎರಡು ಕಿವಿ, ಎರಡು ಬಾಯಿ ಇವೆ.
ದೇಹ ಮಾತ್ರ ಸಾಮಾನ್ಯವಾಗಿ ಇದ್ದು ಮೇಕೆ ಮರಿ ತುಂಬಾನೇ ಆರೋಗ್ಯವಾಗಿದೆ. ಎರಡು ಬಾಯಿಯಿಂದಲೂ ಹಾಲು ಕುಡಿಯುತ್ತಿರುವ ಮೇಕೆ ಮರಿ ನೋಡಲು ವಿಚಿತ್ರವಾಗಿದೆ.
ವಿಷಯ ತಿಳಿಯುತ್ತಿದ್ದಂತೆ ವಿಚಿತ್ರವಾಗಿ ಜನಿಸಿರುವ ಮೇಕೆ ಮರಿ ನೋಡಲು ಆಗಮಿಸುತ್ತಿರುವ ಗ್ರಾಮಸ್ಥರು ಫೋಟೋ ತೆಗೆಯುವ ದೃಶ್ಯ ಸಾಮಾನ್ಯವಾಗಿದೆ. ಮೇಕೆ ಇದೀಗ ಗ್ರಾಮದಲ್ಲಿ ದೊಡ್ಡ ಅಚ್ಚರಿಗೆ ಕಾರಣವಾಗಿದೆ. ಪಶು ವೈದ್ಯರು ಕೂಡ ಮೇಕೆ ನೋಡಲು ಆಗಮಿಸಿ ಮಾಹಿತಿ ಪಡೆದಿದ್ದಾರೆ.




