ಮೀರತ್: ಇಡೀ ದೇಶವೇ ಬೆಚ್ಚಿ ಬೀಳಿಸುವಂತೆ ಮಾಡಿದ್ದ ಮೀರತ್ ನ ಸೌರಭ್ ರಜಪೂತ್ ಕೊಲೆ ಪ್ರಕರಣ ವ್ಯಾಪಕ ಸುದ್ದಿಗೆ ಗ್ರಾಸವಾಗಿರುವಂತೆಯೇ ಇದೇ ಮೊದಲ ಬಾರಿಗೆ ಆರೋಪಿ ಮುಸ್ಕಾನ್ ರಸ್ತೋಗಿ ತಾಯಿ ಪ್ರಕರಣದ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ.
ಐದು ವರ್ಷದ ಮಗಳ ಜನ್ಮದಿನಾಚರಣೆಗಾಗಿ ಬಂದಿದ್ದ ಸರಕು ಸಾಗಾಣಿಕಾ ನೌಕಾಧಿಕಾರಿ ಸೌರಭ್ ರಜಪೂತ್ ನನ್ನು ಆತನ ಪತ್ನಿ ಮುಸ್ಕಾನ್ ರಸ್ತೋಗಿ ಮತ್ತು ಆಕೆಯ ಪ್ರಿಯಕರ ಸಾಹಿಲ್ ಶುಕ್ಲಾ ಇಬ್ಬರೂ ಸೇರಿ ಭೀಕರವಾಗಿ ಕೊಂದು ದೇಹವನ್ನು ತುಂಡು ತುಂಡುಗಳಾಗಿ ಕತ್ತರಿಸಿ ಡ್ರಮ್ ಗೆ ಹಾಕಿ ಸಿಮೆಂಟ್ ನಿಂದ ಮುಚ್ಚಿದ್ದರು.
ಬಳಿಕ ಮುಸ್ಕಾನ್ ರಸ್ತೋಗಿಯ ತಾಯಿ ಕವಿತಾ ಅವರ ನೆರವಿನಿಂದ ಪೊಲೀಸರಿಗೆ ಮಾಹಿತಿ ತಿಳಿದು ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ಅಳಿಯನ ಕುರುಡು ಪ್ರೀತಿಯೇ ಆತನನ್ನು ಕೊಲ್ಲಿಸಿತು: ಇನ್ನು ಈ ಭೀಕರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೇ ಮೊದಲ ಬಾರಿಗೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಕೊಲೆಗಾತಿ ಮುಸ್ಕಾನ್ ರಸ್ತೋಗಿ ಅವರ ತಾಯಿ ಕವಿತಾ ಅವರು, ‘ಅಳಿಯನ ಕುರುಡು ಪ್ರೀತಿಯೇ ಆತನನ್ನು ಕೊಲ್ಲಿಸಿತು. ಆಕೆಯ ಮೇಲೆ ತುಂಬಾ ಪ್ರೀತಿ ಇಟ್ಟಿದ್ದ. ಈ ಬಗ್ಗೆ ನಾನು ಕೂಡ ಆತನಿಗೆ ಎಚ್ಚರಿಕೆ ನೀಡಿದ್ದೆ, ಆದರೆ ಆತ ಮಗಳನ್ನು ತುಂಬಾ ನಂಬಿದ್ದ.
ಆದರೆ ಆಕೆ ತನ್ನ ನಿಜಬಣ್ಣ ತೋರಿಸಿದಳು. ಒಮ್ಮೆ ತನ್ನ ಪ್ರಿಯಕರನ ವಿಚಾರವಾಗಿ ಸಿಕ್ಕಿಬಿದ್ದು ವಿಚಾರ ವಿಚ್ಚೇದನದವರೆಗೂ ಹೋಗಿತ್ತು. ಆದರೆ ಸೌರಭ್ ಬಳಿ ಕ್ಷಮೆ ಕೇಳಿದ್ದಳು. ಮತ್ತೆ ಹೀಗೆ ಮಾಡುವುದಿಲ್ಲ ಎಂದು ಹೇಳಿದ್ದಳು. ಹೀಗಾಗಿ ಸೌರಭ್ ಆಕೆಯನ್ನು ನಂಬಿ ಮತ್ತೆ ಅವಕಾಶ ನೀಡಿದ್ದ. ಆದರೆ ಆಕೆ ಅದನ್ನು ದುರುಪಯೋಗಪಡಿಸಿಕೊಂಡಳು ಎಂದರು.
ತಮ್ಮ ಮಗಳು ತನ್ನ ಸಮಸ್ಯೆಗಳನ್ನು ಹಂಚಿಕೊಳ್ಳದಿದ್ದಕ್ಕೆ ವಿಷಾದ ವ್ಯಕ್ತಪಡಿಸಿದ ಕವಿತಾ ಅವರು, “ನಾನು ಮುಸ್ಕಾನ್ ಜೊತೆ ಮಾತನಾಡುವಾಗ ಆಕೆಗೆ ನನ್ನಿಂದ ಯಾವುದೇ ಮಾಹಿತಿ ಮುಚ್ಚಿಡಬೇಡ ಎಂದು ಹೇಳಿದ್ದೆ, ಸಮಸ್ಯೆ ಏನಾದರೂ ಇದ್ದರೆ ಮೊದಲೇ ಹೇಳಿ ಎಂದು ಕೇಳಿದ್ದೆ. ಆದರೆ ಆಕೆ ಏನನ್ನೂ ಹೇಳಿರಲಿಲ್ಲ. ಅವಳು ತೂಕ ಇಳಿಸಿಕೊಳ್ಳುತ್ತಲೇ ಇದ್ದಳು; ಅವಳು 2 ವರ್ಷಗಳಲ್ಲಿ 10 ಕೆಜಿ ಕಡಿಮೆ ಮಾಡಿಕೊಂಡಿದ್ದಳು. ಅವಳು ನಮ್ಮಿಂದ ಬಹಳಷ್ಟು ವಿಷಯಗಳನ್ನು ಮರೆಮಾಡಿದ್ದಳು.
ಅದಕ್ಕಾಗಿಯೇ ಅವಳು ಇಂದು ಜೈಲಿನಲ್ಲಿದ್ದಾಳೆ. ಅವಳನ್ನು ಬ್ರೈನ್ ವಾಶ್ ಮಾಡಲಾಗಿದೆಯೋ ಅಥವಾ ಡ್ರಗ್ಸ್ ಬಳಸಿದ್ದಾಳೆಯೋ ಎಂದು ನಮಗೆ ತಿಳಿದಿಲ್ಲ. ಅವಳು ನಮ್ಮೊಂದಿಗೆ ಏನನ್ನಾದರೂ ಹಂಚಿಕೊಂಡಿದ್ದರೆ, ಅವಳು ಈ ಸ್ಥಿತಿಯಲ್ಲಿರುತ್ತಿರಲಿಲ್ಲ” ಎಂದು ಕವಿತಾ ಹೇಳಿದ್ದಾರೆ.
ಮಗಳನ್ನು ಗಲ್ಲಿಗೆ ಹಾಕಿ: ತಂದೆ ಪ್ರಮೋದ್: ಇನ್ನು ಇದೇ ವಿಚಾರ ಮಾಧ್ಯಮಗಳೊಂದಿಗೆ ಮಾತನಾಡಿದ ಮುಸ್ಕಾನ್ ತಂದೆ ಪ್ರಮೋದ್, ತನ್ನ ಮಗಳು ಮಾಡಿರುವುದು ಘೋರ ಅಪರಾಧ. ಅವಳಿಗೆ ಕಠಿಣಶಿಕ್ಷೆ ವಿಧಿಸಬೇಕು ಎಂದರು. ಅಂದಹಾಗೆ ಮುಸ್ಕಾನ್ ತಂದೆಯೇ ಆಕೆಯನ್ನು ಪೊಲೀಸ್ ಠಾಣೆಗೆ ಕರೆದೊಯ್ದು ಒಪ್ಪಿಸಿದ್ದರು.
ಮುಸ್ಕಾನ್ ಳನ್ನು ಪೊಲೀಸ್ ಠಾಣೆಗೆ ಕರೆದೊಯ್ಯುವಾಗ, ಪ್ರಮೋದ್ ಸ್ಕೂಟರ್ ನಿಲ್ಲಿಸಿ ಸತ್ಯವನ್ನು ಹೇಳುವಂತೆ ಒತ್ತಾಯಿಸಿದ್ದರು. ಈ ವೇಳೆ ಮುಸ್ಕಾನ್ ಸತ್ಯಾಂಶ ಬಾಯಿಬಿಟ್ಟಿದ್ದಳು. ಆಕೆ ಮತ್ತು ಆಕೆಯ ಲವರ್ ಇಬ್ಬರೂ ಸೇರಿ ಸೌರಭ್ ನನ್ನು ಕೊಂದಿರುವುದಾಗಿ ಒಪ್ಪಿಕೊಂಡಿದ್ದಳು. ಹೀಗೆ ಪ್ರಕರಣ ಬಗೆಹರಿಯಿತು. ಅವಳು ಮಾಡಿದ್ದು ತುಂಬಾ ತಪ್ಪು… ನನ್ನ ಅಳಿಯನಿಗೆ ನ್ಯಾಯ ಸಿಗಬೇಕು ಎಂದು ಹೇಳಿದರು.
ಆರೋಪಿಗಳಾದ ಸಾಹಿಲ್ ಶುಕ್ಲಾ ಮತ್ತು ಮುಸ್ಕಾನ್ ರಸ್ತೋಗಿ ಅವರನ್ನು ಬಂಧಿಸಲಾಗಿದ್ದು, ಅವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.