ತುಮಕೂರು: ತುಂಗಭದ್ರಾ ಡ್ಯಾಂನ ಕ್ರಸ್ಟ್ ಗೇಟ್ ಮುರಿದು ನೀರಿನಲ್ಲಿ ಕೊಚ್ಚಿ ಹೋಗಿರುವ ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಬಿಜೆಪಿ ಸಂಸದ ಗೋವಿಂದ ಕಾರಜೋಳ ಇದು ಸರ್ಕಾರಕ್ಕೆ ಅಪಶಕುನದ ಸಂಕೇತ ಎಂದಿದ್ದಾರೆ.
ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದ ಕಾರಜೋಳ, ತುಂಗಭದ್ರಾ ಜಲಾಶಯದ ಗೇಟ್ ಮುರಿದಿರುವುದು ಸಿಎಂ ಸಿದ್ದರಾಮಯ್ಯ ಸರ್ಕಾರಕ್ಕೆಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಯಾವುದೂ ಸರಿಯಿಲ್ಲ. ರಾಜ್ಯದ ಆಡಳಿತ ಸರಿಯಾಗಿಲ್ಲ ಎಂಬುದಕ್ಕೆ ಈ ಘಟನೆ ಸಾಕ್ಷಿ ಎಂದಿದ್ದಾರೆ.
ಸರ್ಕಾರ ಮೊದಲು ಪೂರ್ಣಾವಧಿ ನೀರಾವರಿ ಮಂತ್ರಿಯನ್ನು ನೇಮಕ ಮಾಡಬೇಕು. ಈಗಿರುವವರು ಪಾರ್ಟ್ ಟೈಂ ನೀರಾವರಿ ಮಂತ್ರಿ. ಆಡಳಿತಕ್ಕಿಂತ ರಾಜಕಾರಣಕ್ಕೆ ಹೆಚ್ಚು ಒತ್ತುಕೊಡುವ ಸ್ಥಿತಿಯಲ್ಲಿದ್ದಾರೆ.
ಪಕ್ಷದ ಅಧ್ಯಕ್ಷರಾಗಿ ಅವರಿಗೆ ಚುನಾವಣೆಗಳಿಗೆ ಹೆಚ್ಚು ಒತ್ತುಕೊಡಬೇಕಾಗಿದೆ. ದೇಶದಲ್ಲಿ ಎಲ್ಲೆಲ್ಲಿ ಚುನಾವಣೆ ನಡೆಯುತ್ತೋ ಅಲ್ಲಿ ಹೆಚ್ಚಿನ ಒತ್ತು ಕೊಡಬೇಕಾಗಿದೆ. ಹೀಗಾಗಿ ನೀರಾವರಿ ಇಲಾಖೆ ಅನಾಥವಾಗಿದೆ ಎಂದು ಡಿ.ಕೆ.ಶಿವಕುಮಾರ್ ವಿರುದ್ಧ ಕಿಡಿಕಾರಿದ್ದಾರೆ.
ನೀರಾವರಿ ಇಲಾಖೆಗೆ ಪೂರ್ಣಾವಧಿ ಸಚಿವರನ್ನು ನೇಮಕ ಮಾಡಲಿ. ಟಿ.ಬಿ.ಡ್ಯಾಂ ನ ನೀರು ವ್ಯರ್ಥವಾಗಿ ಆಂಧ್ರ, ತೆಲಂಗಾಣ ಪಾಲಾಗುತ್ತಿದೆ. ನಮ್ಮ ರೈತರು ಕಣ್ಣೀರು ಹಾಕುವಂತ ಪರಿಸ್ಥಿತಿ ಬಂದೊದಗಿದೆ.
ಡ್ಯಾಂ ಗಳನ್ನು ಸರಿಯಾಗಿ ನಿರ್ವಹಣೆ ಮಾಡಿ, ಗೇಟ್ ಮುರಿಯದಂತೆ ನೋಡಿಕೊಳ್ಳುವುದನ್ನು ಬಿಟ್ಟು ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ರಾಜ್ಯದ ಜನರ ಕಣ್ಣೀರಿನ ಶಾಪ ಸಿದ್ದರಾಮಯ್ಯನವರ ಸರ್ಕಾರಕ್ಕೆ ತಟ್ಟಲಿದೆ. ಕಣ್ಣೀರಲ್ಲೇ ಸಿದ್ದರಾಮಯ್ಯ ಸರ್ಕಾರ ಕೊಚ್ಚಿ ಹೋಗುವ ಕಾಲ ಬಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.